ಆ್ಯಂಬುಲೆನ್ಸ್ ಒದಗಿಸದ ಸರಕಾರಿ ಆಸ್ಪತ್ರೆ: ಬೈಕ್ ನಲ್ಲಿ ಮಗಳ ಮೃತದೇಹ ಸಾಗಿಸಿದ ತಂದೆ

ಭೋಪಾಲ್: ಮಧ್ಯಪ್ರದೇಶದ ಶಹದೋಲ್‌ನ ಸರಕಾರಿ ಆಸ್ಪತ್ರೆಯೊಂದು ಆ್ಯಂಬುಲೆನ್ಸ್ ನಿರಾಕರಿಸಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ ತನ್ನ 13 ವರ್ಷದ ಮಗಳ ಶವವನ್ನು ಬೈಕ್ ನಲ್ಲಿ ಸಾಗಿಸಿರುವ ಆಘಾತಕಾರಿ ಘಟನೆ ನಡೆದಿದೆ.
ಸೋಮವಾರ ರಾತ್ರಿ ತನ್ನ ಮಗಳು ಮಾಧುರಿ ರಕ್ತಹೀನತೆಯಿಂದ ಸಾವನ್ನಪ್ಪಿದಳು. ಆಸ್ಪತ್ರೆಯ ಅಧಿಕಾರಿಗಳ ಬಳಿ ವಾಹನಕ್ಕಾಗಿ ಅಂಗಲಾಚಿದೆ. ಆದರೆ ಅವರು 15 ಕಿ.ಮೀ ದೂರದ ಸ್ಥಳಗಳಿಗೆ ವಾಹನಗಳು ಲಭ್ಯವಿಲ್ಲ ಎಂದು ತಿಳಿಸಿದರು ಎಂದು ಶಹದೋಲ್‌ನಿಂದ 70 ಕಿಮೀ ದೂರದಲ್ಲಿರುವ ಕೋಟಾ ಗ್ರಾಮದ ನಿವಾಸಿ ಲಕ್ಷ್ಮಣ್ ಸಿಂಗ್ ಹೇಳಿದರು.
"ನಾವು ಆಸ್ಪತ್ರೆಯವರಲ್ಲಿ ಶವ ವಾಹನವನ್ನು ಕೇಳಿದ್ದೆವು ಆದರೆ ಅದು 15 ಕಿಮೀಗಿಂತ ಹೆಚ್ಚು ದೂರಕ್ಕೆ ವಾಹನ ಲಭ್ಯವಿರುವುದಿಲ್ಲ ಎಂದು ಅವರು ಹೇಳಿದರು ನಾವೇ ವ್ಯವಸ್ಥೆ ಮಾಡಿಕೊಳ್ಲುವಂತೆ ಹೇಳಿದರು. ಹಣದ ಕೊರತೆಯಿಂದಾಗಿ ನಾವು ನಮ್ಮ ಮಗಳ ಮೃತ ದೇಹವನ್ನು ಬೈಕ್ ನಲ್ಲಿ ತೆಗೆದುಕೊಂಡು ಹೋಗಿದ್ದೇವೆ’’ ಎಂದು ಲಕ್ಷ್ಮಣ್ ಹೇಳಿದರು.
ತಮ್ಮ ಗ್ರಾಮದಿಂದ ಸುಮಾರು 20 ಕಿಮೀ ದೂರದಲ್ಲಿದ್ದಾಗ ಶಹದೋಲ್ ಕಲೆಕ್ಟರ್ ವಂದನಾ ವೈದ್ಯ ನಮಗೆ ಸಿಕ್ಕಿದರು. ಅವರು ಮತ್ತೊಂದು ಗ್ರಾಮಕ್ಕೆ ತೆರಳುತ್ತಿದ್ದರು. ವೈದ್ಯ ಅವರು ಮಗಳ ಮೃತದೇಹವನ್ನು ಗ್ರಾಮಕ್ಕೆ ಕೊಂಡೊಯ್ಯಲು ವಾಹನ ವ್ಯವಸ್ಥೆ ಮಾಡಿಕೊಟ್ಟರು ಎಂದು ಸಿಂಗ್ ಹೇಳಿದರು.
ಶಹದೋಲ್ ಕಲೆಕ್ಟರ್ ಕುಟುಂಬಕ್ಕೆ ಸ್ವಲ್ಪ ಆರ್ಥಿಕ ಸಹಾಯವನ್ನು ಒದಗಿಸಿದರು ಹಾಗೂ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದರು.







