ವಿಚಾರಣೆಗೆ ಹಾಜರಾಗುವಂತೆ ಕೆಜಿಎಫ್ ಬಾಬುಗೆ ಈಡಿ ಸಮನ್ಸ್

ಬೆಂಗಳೂರು, ಮೇ.17-ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಉದ್ಯಮಿ ಯೂಸೂಫ್ ಶರೀಫ್ ಅಲಿಯಾಸ್ ಕೆಜಿಎಫ್ ಬಾಬುಗೆ ಈಡಿ ಸಂಕಷ್ಟ ಎದುರಾಗಿದ್ದು, ಇಂದು ದೆಹಲಿಯಲ್ಲಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಜಾರಿ ನಿರ್ದೇಶನಾಲಯದ ಕೇಂದ್ರ ಕಚೇರಿ ದೆಹಲಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ಸೂಚನೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಅವರು ದೆಹಲಿಗೆ ತೆರಳಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಕೆಜಿಎಫ್ ಬಾಬು ಭಾರಿ ಪ್ರಮಾಣದಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಈಡಿ ಅಧಿಕಾರಿಗಳಿಗೆ ಕೆಲ ಸಾಕ್ಷ್ಯಗಳು ಲಭ್ಯವಾದ ಹಿನ್ನೆಲೆಯಲ್ಲಿ ವಸಂತನಗರದಲ್ಲಿರುವ ಬಾಬು ಅವರು ರುಕ್ಸಾನಾ ಪ್ಯಾಲೇಸ್ ನಿವಾಸ, ಉಮ್ರಾ ಡೆವಲರ್ಸ್, ಉಮ್ರಾ ರಿಯಲ್ ಎಸ್ಟೇಟ್ ಕಂಪನಿಗಳ ಮೇಲೆ 20ಕ್ಕೂ ಹೆಚ್ಚು ಇಡಿ ಅಧಿಕಾರಿಗಳ ತಂಡವು ದಾಳಿ ನಡೆಸಿ ದಾಖಲೆಗಳನ್ನು ಜಾಲಾಡಿದ್ದರು. ಈ ಸಂಬಂಧಿಸಿದ ದಾಖಲೆಗಳು ಈಡಿ ಕೈ ಸೇರಿದೆ.
ಮೊದಲ ಪತ್ನಿ ರುಕ್ಸಾನ, ಎರಡನೆ ಪತ್ನಿ ಶಾಜಿಯಾ, ಮಗಳು ಉಮ್ರಾ ಫರೀಫ್, ಮಗ ಅಫ್ನಾನ್ ಸೇರಿ ಕುಟುಂಬಸ್ಥರ ಹೆಸರಿನಲ್ಲಿ ಒಟ್ಟು 23 ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ. ಬಾಬು ತಮ್ಮ ಹೆಸರಿನಲ್ಲಿ 12 ಬ್ಯಾಂಕ್‍ಗಳಲ್ಲಿ ಖಾತೆ ಹೊಂದಿದ್ದಾರೆ. ಕುಟುಂಬಸ್ಥರ ಖಾತೆಯಲ್ಲಿ 70 ಕೋಟಿಗೂ ಅಧಿಕ ಹಣ ಇರುವುದು ಇಡಿ ತನಿಖೆಯಲ್ಲಿ ತಿಳಿದು ಬಂದಿದೆ.