ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದ ಸುಪ್ರೀಂಕೋರ್ಟ್

ಹೊಸದಿಲ್ಲಿ: ಅಸ್ಸಾಂ ಕಾಂಗ್ರೆಸ್ ನ ಉಚ್ಛಾಟಿತ ಮಹಿಳಾ ನಾಯಕಿಯೊಬ್ಬರು ಸಲ್ಲಿಸಿದ್ದ ಪ್ರಕರಣದಲ್ಲಿ ಭಾರತೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ (Youth Congress chief BV Srinivas)ಅವರಿಗೆ ಬಂಧನದಿಂದ ಸುಪ್ರೀಂ ಕೋರ್ಟ್ ಬುಧವಾರ ಮಧ್ಯಂತರ ರಕ್ಷಣೆ ನೀಡಿದೆ.
ತನಗೆ ಮಾನಸಿಕ ಹಿಂಸೆ ನೀಡಿದ್ದಾರೆಂದು ಆರೋಪಿಸಿ ಮಹಿಳಾ ನಾಯಕಿಯೊಬ್ಬರು ಶ್ರೀನಿವಾಸ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.
ಗೌಹಾಟಿ ಹೈಕೋರ್ಟ್ ತನ್ನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ ಭಾರತೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಎಫ್‌ಐಆರ್ ರದ್ದುಗೊಳಿಸಲು ಹೈಕೋರ್ಟ್ ಕೂಡ ನಿರಾಕರಿಸಿತ್ತು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಬಿ. ಆರ್ .ಗವಾಯಿ ಹಾಗೂ ಸಂಜಯ್ ಕರೋಲ್ ಅವರ ಪೀಠವು ಜುಲೈ 10 ರೊಳಗೆ ತಮ್ಮ ಉತ್ತರವನ್ನು ಕೋರಿ ಅಸ್ಸಾಂ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ತನಿಖೆಗೆ ಸಹಕರಿಸುವಂತೆ ಹಾಗೂ ಮೇ 22 ರಂದು ಪೊಲೀಸರ ಮುಂದೆ ಹಾಜರಾಗುವಂತೆ ಶ್ರೀನಿವಾಸ್ ಅವರಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.
"ಎಫ್‌ಐಆರ್ ದಾಖಲಿಸಲು ಒಂದು ತಿಂಗಳ ವಿಳಂಬವನ್ನು ಪರಿಗಣಿಸಿ, ಅರ್ಜಿದಾರರು ಮಧ್ಯಂತರ ರಕ್ಷಣೆಗೆ ಅರ್ಹರಾಗಿದ್ದಾರೆ" ಎಂದು ಸುಪ್ರೀಂ ಕೋರ್ಟ್ ಪೀಠ ಹೇಳಿದೆ.







