ಪುತ್ತೂರು | ಬಿಜೆಪಿ ನಾಯಕರ ಭಾವಚಿತ್ರವಿರುವ ಬ್ಯಾನರ್ ಗೆ ಚಪ್ಪಲಿ ಹಾರ ಹಾಕಿದ ಆರೋಪಿಗಳಿಗೆ ಪೊಲೀಸ್ ದೌರ್ಜನ್ಯ: ಆರೋಪ
ಸಾಮಾಜಿಕ ಜಾಲತಾಣದಲ್ಲಿ ಫೋಟೊ ವೈರಲ್

ಪುತ್ತೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ಭಾವಚಿತ್ರವಿರುವ ಬ್ಯಾನರ್ ಅಳವಡಿಸಿ ಅದಕ್ಕೆ ಚಪ್ಪಲಿ ಹಾರ ಹಾಕಿದ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳಿಗೆ ಪೊಲೀಸರು 'ಥರ್ಡ್ ಡಿಗ್ರಿ ಟ್ರೀಟ್ಮೆಂಟ್' ನೀಡಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.
ಬಂಧಿತ ಆರೋಪಿಗಳನ್ನು ಪಕ್ಷೇತರ ಅಭ್ಯರ್ಥಿಯಾಗಿದ್ದ ಅರುಣ್ ಕುಮಾರ್ ಪುತ್ತಿಲ ಅವರು ಜಾಮೀನು ಮೂಲಕ ಠಾಣೆಯಿಂದ ಕರೆದೊಯ್ದಿದ್ದಾರೆ ಎನ್ನಲಾಗಿದೆ. ಆದರೆ ಅಷ್ಟೊಂದು ಗಂಭೀರ ಸ್ಥಿತಿಯಲ್ಲಿರುವ ಅವರನ್ನು ಯಾವುದೇ ಆಸ್ಪತ್ರೆಗೆ ದಾಖಲು ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಆರೋಪಿಗಳು ನಡೆದಾಡಲು ಕಷ್ಟ ಪಡುವ ಹಾಗೂ ದೇಹದ ಮೇಲೆ ಗಂಭೀರ ಗಾಯಗೊಂಡಿರುವ ಚಿತ್ರಗಳು ಹರಿದಾಡುತ್ತಿವೆ.
ನಳಿನ್ ಕುಮಾರ್ ಕಟೀಲ್ ಮತ್ತು ಡಿ.ವಿ.ಸದಾನಂದ ಗೌಡ ಅವರ ಬಗ್ಗೆ ಶ್ರದ್ಧಾಂಜಲಿ ಬ್ಯಾನರ್ ಅಳವಡಿಸಿ ಅದಕ್ಕೆ ಚಪ್ಪಲಿ ಹಾರ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿ ಆರೋಪಿಗಳನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದರು. ಪುತ್ತೂರು ತಾಲೂಕಿನ ನರಿಮೊಗರು ನಿವಾಸಿಗಳಾದ ವಿಶ್ವನಾಥ, ಮಾಧವ, ಅಭಿ ಯಾನೆ ಅವಿನಾಶ್, ಶಿವರಾಮ್, ಚೈತ್ರೇಶ್, ಈಶ್ವರ್, ನಿಶಾಂತ್, ದೀಕ್ಷಿತ್, ಗುರುಪ್ರಸಾದ್ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷರ ಹಾಗೂ ಕೆಲವು ಪ್ರಭಾವಿಗಳ ಒತ್ತಡಕ್ಕೆ ಒಳಗಾಗಿ ಪೊಲೀಸರು ಆರೋಪಿಗಳಿಗೆ ಚಿತ್ರ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಬಿಜೆಪಿ ಹಾಗೂ ನಗರಸಭೆಯ ಮುಖ್ಯಾಧಿಕಾರಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ನಗರ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿದ್ದರು.
ಬಂಧಿತ ಆರೋಪಿಗಳಿಗೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎನ್ನಲಾಗಿದ್ದು, ತಳಿತದಿಂದ ಗಾಯಗೊಂಡ ಯುವಕರ ಚಿತ್ರಗಳು ಹಾಗೂ ತಡರಾತ್ರಿ ನಡೆದಾಡಲು ಕಷ್ಟ ಪಡುವ ರೀತಿಯಲ್ಲಿ ಹೆಜ್ಜೆ ಹಾಕುತ್ತಿರುವ ಯುವಕರ ವೀಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕಾಲು, ಬೆನ್ನು ಮತ್ತು ಸೊಂಟದ ಹಿಂಬಾಗದಲ್ಲಿ ಥಳಿಸಿರುವುದು ಫೋಟೋದಲ್ಲಿ ಕಂಡು ಬರುತ್ತಿದೆ.
ಎಸ್ಪಿ ಪ್ರತಿಕ್ರಿಯೆ ಏನು ?
ಬಿಜೆಪಿ ರಾಜ್ಯಾಧ್ಯಕ್ಷರ ಬ್ಯಾನರಿಗೆ ಚಪ್ಪಲಿ ಹಾರ ಹಾಕಿದ್ದ ಪ್ರಕರಣದಲ್ಲಿ ಪುತ್ತೂರು ನಗರ ಠಾಣೆಯಲ್ಲಿ ದಸ್ತಗಿರಿ ಮಾಡಿದ ಆರೋಪಿತರಿಗೆ ಪೊಲೀಸ್ ರು ಹಲ್ಲೆ ಮಾಡಿರುವುದಾಗಿ ಸಾಮಾಜಿಕ ಜಾಲತಾಣ ಗಳಲ್ಲಿ ಸುದ್ದಿ ಪ್ರಸಾರ ವಾಗುತ್ತಿರುವ ಬಗ್ಗೆ ತಿಳಿದು ಬಂದಿದ್ದು, ಈ ಬಗ್ಗೆ ಸತ್ಯಾoಶ ತಿಳಿದುಕೊಳ್ಳಲು ವಿಚಾರಣೆ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.