ಯಾರೂ ವಿದ್ಯುತ್ ಬಿಲ್ ಕಟ್ಟುವ ಅಗತ್ಯವಿಲ್ಲ, ಕಾಂಗ್ರೆಸ್‍ನವರೇ ಕಟ್ಟುತ್ತಾರೆ: ನಳಿನ್ ಕುಮಾರ್ ಕಟೀಲ್

ಬೆಂಗಳೂರು, ಮೇ 17: ‘ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ಯಾರೂ ವಿದ್ಯುತ್ ಬಿಲ್ ಕಟ್ಟುವ ಅಗತ್ಯವಿಲ್ಲ’ ಎಂದು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಹೇಳಿದ್ದರು. ಹೀಗಾಗಿ ಜನರು ಯಾರೂ ಈಗ ವಿದ್ಯುತ್ ಬಿಲ್ ಕಟ್ಟಬಾರದೆಂದು ಮನವಿ ಮಾಡುತ್ತೇನೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬುಧವಾರ ಇಲ್ಲಿನ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್‍ನ ಗ್ಯಾರೆಂಟಿಗಳಿಂದ ಕೆಲವು ಕಡೆ ವಿದ್ಯುತ್ ಬಿಲ್ ಕಟ್ಟಲು ನಿರಾಕರಿಸಲಾಗುತ್ತಿದೆ. ಜನರ ಈ ನಿರ್ಧಾರ ಸಹಜವೇ ಆಗಿದೆ. ನಮ್ಮ ಸರ್ಕಾರ ಬಂದ ಮೇಲೆ 200 ಯೂನಿಟ್ ವಿದ್ಯುತ್ ಉಚಿತ ಎಂದು ಭರವಸೆ ನೀಡಿದ್ದರು. ನನಗೂ ಸೇರಿ ಉಚಿತ ಕರೆಂಟ್ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಅಲ್ವಾ?. ಹೀಗಿರುವಾಗ ಜನರು ಏಕೆ ವಿದ್ಯುತ್ ಬಿಲ್ ಪಾವತಿಸಬೇಕು? ಎಂದು ಪ್ರಶ್ನಿಸಿದರು.
‘ರಾಜ್ಯದ ಜನರು ಕರೆಂಟ್ ಬಿಲ್ ಕಟ್ಟಬೇಡಿ, ಅವರೇ ಹೇಳಿರುವಂತೆ ಭಾಗ್ಯಗಳ ಲೆಕ್ಕದಲ್ಲಿ ಯಾರೂ ಕರೆಂಟ್ ಬಿಲ್ ಕಟ್ಟುವ ಅಗತ್ಯವಿಲ್ಲ, ಕಾಂಗ್ರೆಸ್‍ನವರೇ ಜನರ ಕರೆಂಟ್ ಬಿಲ್ ಕಟ್ಟುತ್ತಾರೆ’ ಎಂದ ಕಟೀಲ್, ‘ರಾಜ್ಯದ ಜನರು ಕಾಂಗ್ರೆಸ್‍ಗೆ ಬಹುಮತ ನೀಡಿದ್ದು, ಆಡಳಿತ ನಡೆಸಲಿ. ತ್ವರಿತಗತಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಮಾಬೇಕು ಎಂದು ಆಗ್ರಹಿಸಿದರು.