ಚಿನ್ನದಂತ ಕ್ಷೇತ್ರವನ್ನು ವರಿಷ್ಠರ ಸೂಚನೆ ಮೇರೆಗೆ ಬಿಟ್ಟು ಬಂದೆ: ವರುಣಾದಲ್ಲಿ ಸೋಮಣ್ಣ
''ಆರ್. ಅಶೋಕ್ ಗಿಂತ ಹೆಚ್ಚು ಮತಗಳನ್ನು ಗಳಿಸಿದ್ದೇನೆ''

ಮೈಸೂರು,ಮೇ.17: ಚಿನ್ನದಂತ ಗೋವಿಂದರಾಜನಗರವನ್ನು ಬಿಟ್ಟು ಬಂದು ವರಿಷ್ಟರ ಸೂಚನೆ ಮೇರೆಗೆ ವರುಣಾ ಮತ್ತು ಚಾಮರಾಜನಗರ ಕ್ಷೇತ್ರಗಳಲ್ಲಿ ನಿಲ್ಲಬೇಕಾಯಿತು. ನನ್ನ ಸೋಲಿಗೆ ಏನು ಕಾರಣ ಎಂಬುದನ್ನು ವರಿಷ್ಠರ ಗಮನಕ್ಕೆ ತಂದಿದ್ದೇನೆ ಎಂದು ವರುಣಾ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ತಿಳಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ವರುಣಾ ಕ್ಷೇತ್ರದ ಕಾರ್ಯಕರ್ತರ ಸಭೆ ನಡೆಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಗೋವಿಂದರಾಜನಗರವನ್ನು ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿ ಮಾಡಿದ್ದೆ. ''ಅಂತಹ ಚಿನ್ನದಂತ ಕ್ಷೇತ್ರವನ್ನು ವರಿಷ್ಠರ ಸೂಚನೆ ಮೇರೆಗೆ ಬಿಟ್ಟು ಬಂದೆ. ಸೋಲು ಗೆಲುವು ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ಕೇವಲ 23 ದಿನಗಳಲ್ಲಿ ನಾನು ಚುನಾವಣೆಯನ್ನು ಎದುರಿಸಿ ಸಾಕಷ್ಟು ಮತಗಳನ್ನು ಗಳಿಸಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಎದುರು ಸ್ಪರ್ಧಿಸಿ ಸೋತ ಅಶೋಕ್ ಅವರ ಹಾಗೆ ನಾನು ಮಾಡಲಿಲ್ಲ'' ಎಂದು ಹೇಳಿದರು.
ನನ್ನ ಸೋಲಿಗೆ ಏನು ಕಾರಣ ಎಂದು ಈಗಾಗಲೇ ವರಿಷ್ಠರ ಗಮನಕ್ಕೆ ತಂದಿದ್ದೇನೆ. ಸೋಲಿನಿಂದ ಧೃತಿ ಗೆಡುವುದಿಲ್ಲ, ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಂಘಟನೆ ಮಾಡುತ್ತೇನೆ ಎಂದರು.
ನಮ್ಮದು ಡಬ್ಬಲ್ ಇಂಜಿನ್ ಸರ್ಕಾರ, ಕಾಂಗ್ರೆಸ್ ನವರದು ಡಬ್ಬಲ್ ಸ್ಟೇರಿಂಗ್ ಸರ್ಕಾರ ಎಂದು ಪ್ರಶ್ನೆಯೊಂದಕ್ಕೆ ವ್ಯಂಗ್ಯವಾಡಿದರು.





