ಚಿಕ್ಕಮಗಳೂರು: ಕಾಂಗ್ರೆಸ್ ಗೆದ್ದಿದ್ದಕ್ಕೆ ರಸ್ತೆಯಲ್ಲಿ ಪಟಾಕಿ ಸಿಡಿಸಿದ ದಲಿತ ಯುವಕನಿಗೆ ಮಾರಕಾಸ್ತ್ರದಿಂದ ಹಲ್ಲೆ
ಪ್ರಕರಣ ದಾಖಲು

ಚಿಕ್ಕಮಗಳೂರು, ಮೇ 17: ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಕಂಡ ಹಿನ್ನೆಲೆಯಲ್ಲಿ ದಲಿತ ಸಮುದಾಯ ಕೆಲ ಯುವಕರು ಮಂಗಳವಾರ ರಾತ್ರಿ ನಗರದ ಕಲ್ಯಾಣ ನಗರ ಬಡಾವಣೆಯ ರಸ್ತೆಯಲ್ಲಿ ಪಟಾಕಿ ಸಿಡಿಸಿದ ಕಾರಣಕ್ಕೆ ಬಿಜೆಪಿ ಕಾರ್ಯಕರ್ತನೊಬ್ಬ ಮಾರಕಾಸ್ತ್ರದಿಂದ ದಲಿತ ಯುವಕನೊಬ್ಬನ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದ್ದು, ಘಟನೆಯಲ್ಲಿ ಹಲ್ಲೆಗೊಳಗಾದ ಯುವಕ ತೀವ್ರವಾಗಿ ಗಾಯಗೊಂಡಿರುವುದು ವರದಿಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಚಿಕ್ಕಮಗಳೂರು ಕ್ಷೇತ್ರದ ಸಿ.ಟಿ.ರವಿ ಅವರು ಕಾಂಗ್ರೆಸ್ ಅಭ್ಯರ್ಥಿ ತಮ್ಮಯ್ಯ ವಿರುದ್ಧ ಹೀನಾಯ ಸೋಲು ಕಂಡಿದ್ದರು. ಈ ಗೆಲುವಿನ ಸಂಭ್ರಮಾಚರಣೆ ಮಾಡುವ ಉದ್ದೇಶದಿಂದ ಕಲ್ಯಾಣ ನಗರ ಬಡಾವಣೆ ನಿವಾಸಿ ಅರುಣ್ ಎಂಬಾತ ತನ್ನ ಸಂಗಡಿಗರೊಂದಿಗೆ ರಸ್ತೆಯಲ್ಲಿ ಮಂಗಳವಾರ ರಾತ್ರಿ ಪಟಾಕಿ ಹೊಡೆದಿದ್ದು, ಈ ವೇಳೆ ರಸ್ತೆ ಬದಿಯಲ್ಲೇ ಮನೆ ಹೊಂದಿದ್ದ ಬಿಜೆಪಿ ಕಾರ್ಯಕರ್ತನೊಬ್ಬ, ತನ್ನ ಮನೆ ಮುಂದೆ ಏಕೆ ಪಟಾಕಿ ಹೊಡೆದಿದ್ದೀಯ ಎಂದು ಅರುಣನ ವಿರುದ್ಧ ಗಲಾಟೆ ಮಾಡಿದ್ದಲ್ಲದೇ ಹರಿತವಾದ ಆಯುಧದಿಂದ ಹಲ್ಲೆ ಮಾಡಿದ್ದಾನೆಂದು ಆರೋಪಿಸಲಾಗಿದೆ.
ಹಲ್ಲೆಯಿಂದ ಅರಣನ ಎಡಗೈಯ ತೋಳಿಗೆ ತೀವ್ರವಾಗಿ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆ ಸಂಬಂಧ ನಗರ ಠಾಣೆಯಲ್ಲಿ ದಲಿತ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ಮಾಡಿದ ಆರೋಪಿ ನಾಪತ್ತೆಯಾಗಿದ್ದಾನೆಂದು ತಿಳಿದು ಬಂದಿದೆ.





