'ದೇಶ ವಿರೋಧಿಗಳ' ವಿರುದ್ಧ ಮಾತನಾಡಿದ್ದರಿಂದ ನನಗೆ 30-40 ಕೋಟಿ ರೂ. ನಷ್ಟವಾಗಿದೆ: ಕಂಗನಾ ರಣಾವತ್

ಮುಂಬೈ: ರಾಜಕಾರಣಿಗಳು, ದೇಶವಿರೋಧಿಗಳು, 'ತುಕ್ಡೆ-ತುಕ್ಡೆ ಗ್ಯಾಂಗ್' ವಿರುದ್ಧ ಮಾತನಾಡಿದಕ್ಕೆ ನಾನು ವಾರ್ಷಿಕ 30-40 ಕೋಟಿ ರೂ. ಗಳಷ್ಟು ನಷ್ಟ ಅನುಭವಿಸಿದ್ದೇನೆ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ಹೇಳಿದ್ದಾರೆ ಎಂದು indianexpress.com ವರದಿ ಮಾಡಿದೆ.
ಈ ಕುರಿತು ಇನ್ಸ್ಟಾಗ್ರಾಮ್ ಸ್ಟೋರಿ ಹಾಕಿದ ಕಂಗನಾ, “25 ಬ್ರಾಂಡ್ ಜಾಹೀರಾತುಗಳಿಂದ ನನ್ನನ್ನು ಏಕಾಏಕಿ ಕೈಬಿಡಲಾಗಿದೆ ಮತ್ತು ಇದರಿಂದ ಪ್ರತಿ ವರ್ಷ 30-40 ಕೋಟಿ ರೂಪಾಯಿಗಳಷ್ಟು ನಷ್ಟವನ್ನು ಅನುಭವಿಸುತ್ತಿದ್ದೇನೆ” ಎಂದು ಹೇಳಿದ್ದಾರೆ.
ನನಗೆ ಏನು ಹೇಳಬೇಕು ಅದನ್ನು ಹೇಳುತ್ತೇನೆ, ಅದಕ್ಕೆ ನಾನು ಹಣ ಕಳೆದುಕೊಂಡರೂ ಅಡ್ಡಿಯಲ್ಲ ಎಂದು ಎಲಾನ್ ಮಸ್ಕ್ ಹೇಳಿರುವ ಸಂದರ್ಶನದ ಚಿತ್ರವನ್ನು ಹಂಚಿಕೊಂಡಿರುವ ಕಂಗನಾ, 'ಇದು ಒಂದು ಗುಣ, ನಿಜವಾದ ಸ್ವಾತಂತ್ರ್ಯ ಮತ್ತು ಯಶಸ್ಸು, ಹಿಂದೂ ಧರ್ಮದ ಪರವಾಗಿ, ರಾಜಕಾರಣಿಗಳು/ ದೇಶವಿರೋಧಿಗಳು /ತುಕ್ಡೆ ಗ್ಯಾಂಗ್ ವಿರುದ್ಧ ಮಾತನಾಡಿದ್ದಕ್ಕಾಗಿ ನನ್ನನ್ನು 20-25 ಬ್ರ್ಯಾಂಡ್ ಜಾಹೀರಾತುಗಳಿಂದ ರಾತ್ರೋರಾತ್ರಿ ಕೈಬಿಡಲಾಗಿದೆ. ಅದರಿಂದ ವರ್ಷಕ್ಕೆ 30-40 ಕೋಟಿ ರೂಪಾಯಿಗಳಷ್ಟು ನಷ್ಟವಾಗುತ್ತಿದೆ' ಎಂದಿದ್ದಾರೆ
'ಆದರೆ, ನಾನು ಸ್ವತಂತ್ರನಾಗಿದ್ದೇನೆ ಮತ್ತು ನನಗೆ ಬೇಕಾದುದನ್ನು ಹೇಳುವುದರಿಂದ ಯಾವುದೂ ನನ್ನನ್ನು ತಡೆಯಬಾರದು, ಭಾರತದ ಸಂಸ್ಕೃತಿ ಮತ್ತು ಸಮಗ್ರತೆಯನ್ನು ಧ್ವೇಷಿಸುವ ಅಜೆಂಡಾ ಚಾಲಿತ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಅವರ ಕಾರ್ಪೊರೇಟ್ ಬ್ರ್ಯಾಂಡ್ ಮುಖ್ಯಸ್ಥರು ನನಗೆ ಬೇಕಾಗಿಲ್ಲ. ನಾನು ಎಲಾನ್ ರನ್ನು ಪ್ರಶಂಸಿಸುತ್ತೇನೆʼ ಎಂದು ಕಂಗನಾ ಬರೆದಿದ್ದಾರೆ.







