ಅದಾನಿ ಗ್ರೂಪ್ ಕುರಿತು ತನಿಖೆ: ಸೆಬಿಗೆ ಇನ್ನೂ ಮೂರು ತಿಂಗಳು ಸಮಯ ನೀಡಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ,ಮೇ 17 : ಸರ್ವೋಚ್ಚ ನ್ಯಾಯಾಲಯವು ಅದಾನಿ ಗ್ರೂಪ್ ತನ್ನ ಕಂಪನಿಯ ಶೇರುಗಳ ಬೆಲೆಗಳನ್ನು ಕೃತಕವಾಗಿ ಹೆಚ್ಚಿಸಿತ್ತು ಎಂಬ ಆರೋಪಗಳ ಕುರಿತು ತನಿಖೆಯನ್ನು ಪೂರ್ಣಗೊಳಿಸಲು ಮಾರುಕಟ್ಟೆ ನಿಯಂತ್ರಕ ಸೆಬಿಗೆ ಆಗಸ್ಟ್ 14ರವರೆಗೆ ಮೂರು ತಿಂಗಳ ಹೆಚ್ಚುವರಿ ಕಾಲಾವಕಾಶವನ್ನು ನೀಡಿದೆ.
ಅಮೆರಿಕದ ಹೂಡಿಕೆ ಸಂಸ್ಥೆ ಹಿಂಡೆನ್‌ಬರ್ಗ್ ರೀಸರ್ಚ್ ಕಳೆದ ಜನವರಿಯಲ್ಲಿ ಅದಾನಿ ಗ್ರೂಪ್ ವಿರುದ್ಧ ವರದಿಯನ್ನು ಪ್ರಕಟಿಸಿದ್ದ ಹಿನ್ನೆಲೆಯಲ್ಲಿ ಅದಾನಿ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಸುವಂತೆ ಮಾ.2ರಂದು ಸರ್ವೋಚ್ಚ ನ್ಯಾಯಾಲಯವು ಸೆಬಿಗೆ ನಿರ್ದೇಶನ ನೀಡಿತ್ತು. ಮೇ 2ರೊಳಗೆ ತನ್ನ ವರದಿಯನ್ನು ಸಲ್ಲಿಸುವಂತೆ ಅದು ಸೆಬಿಗೆ ಸೂಚಿಸಿತ್ತು.
ಎ.29ರಂದು ನಡೆದಿದ್ದ ವಿಚಾರಣೆ ಸಂದರ್ಭದಲ್ಲಿ ಸೆಬಿ,ತನಿಖೆಯನ್ನು ಪೂರ್ಣಗೊಳಿಸಲು ತನಗೆ ಕನಿಷ್ಠ ಆರು ತಿಂಗಳುಗಳ ಕಾಲಾವಕಾಶ ಅಗತ್ಯವಿದೆ ಎಂದು ತಿಳಿಸಿತ್ತು. ಅದಾನಿ ಗ್ರೂಪ್‌ನ ಲಿಸ್ಟೆಡ್,ಅನ್‌ಲಿಸ್ಟೆಡ್ ಮತ್ತು ಸಾಗರೋತ್ತರ ಕಂಪನಿಗಳನ್ನೊಳಗೊಂಡ ಸಂಕೀರ್ಣ ವಹಿವಾಟುಗಳನ್ನು ಉಲ್ಲೇಖಿಸಿ ಸೆಬಿ ಹೆಚ್ಚಿನ ಕಾಲಾವಕಾಶವನ್ನು ಕೋರಿತ್ತು.
ಬುಧವಾರ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು,ತನಿಖೆಯ ಕುರಿತು ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ಸೆಬಿಗೆ ಸೂಚಿಸಿತು.
ಆಗಸ್ಟ್ 24ರ ಗಡುವನ್ನು ಪುನರ್‌ಪರಿಶೀಲಿಸುವಂತೆ ಸೆಬಿ ಪರ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು ನ್ಯಾಯಾಲಯವನ್ನು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ.ಚಂದ್ರಚೂಡ್ ಅವರು,‘ನಾವು ಈಗಾಗಲೇ ನಿಮಗೆ ಎರಡು ತಿಂಗಳುಗಳ ಸಮಯವನ್ನು ನೀಡಿದ್ದೇವೆ,ಹೀಗಾಗಿ ನೀವು ಏನು ಮಾಡಿದ್ದೀರಿ ಎನ್ನುವುದನ್ನು ನಮಗೆ ತಿಳಿಸಿ. ಈಗ ಇನ್ನೂ ಮೂರು ತಿಂಗಳ ಹೆಚ್ಚುವರಿ ಸಮಯ ನೀಡಿದ್ದೇವೆ,ಅಲ್ಲಿಗೆ ಐದು ತಿಂಗಳ ಸಮಯಾವಕಾಶ ಸಿಕ್ಕಿದಂತಾಗಿದೆ. ನಾವು ಗಡುವನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸುವುದಿಲ್ಲ. ಯಾವುದಾದರೂ ಪ್ರಾಮಾಣಿಕವಾದ ತೊಂದರೆಯಿದ್ದರೆ ನಮಗೆ ತಿಳಿಸಿ ’ಎಂದು ಹೇಳಿದರು.







