ನಕಲಿ ಸುದ್ದಿ ಪ್ರಸಾರ: ಲಕ್ಷಕ್ಕೂ ಅಧಿಕ ಆನ್‍ಲೈನ್ ಖಾತೆ ಮುಚ್ಚಿದ ಚೀನಾ

ಬೀಜಿಂಗ್, ಮೇ 17: ಆನ್‍ಲೈನ್‍ನಲ್ಲಿ ನಕಲಿ ಹಾಗೂ ಗಾಳಿ ಸುದ್ಧಿ ಹರಡುವುದನ್ನು ತಡೆಯುವ ಪ್ರಯತ್ನ ತೀವ್ರಗೊಳಿಸಲಾಗಿದ್ದು ಕಳೆದ ಒಂದು ತಿಂಗಳಲ್ಲಿ 1 ಲಕ್ಷಕ್ಕೂ ಅಧಿಕ ಆನ್‍ಲೈನ್ ಖಾತೆಗಳನ್ನು ಮುಚ್ಚಿದೆ ಎಂದು ಚೀನಾದ ಸೈಬರ್‍ಸ್ಪೇಸ್ ಏಜೆನ್ಸಿ ಹೇಳಿದೆ.
ಸೈಬರ್‍ಸ್ಪೇಸ್ ಅಡ್ಮಿನಿಸ್ಟ್ರೇಷನ್ ಆಫ್ ಚೀನಾ(ಸಿಎಸಿ) ಆನ್‍ಲೈನ್ ಮಾಹಿತಿಯನ್ನು ಸ್ವಚ್ಛಗೊಳಿಸಲು ವಿಶೇಷ ಅಭಿಯಾನವನ್ನು ಆರಂಭಿಸಿದ್ದು ನಕಲಿ ಸುದ್ದಿ ಗಳನ್ನು ಪ್ರಸಾರ ಮಾಡುವ ಮತ್ತು ಸರಕಾರದ ನಿಯಂತ್ರಣದ ಮಾಧ್ಯಮದ ಸೋಗಿನಲ್ಲಿ ಕಾರ್ಯನಿರ್ವಹಿಸುವ ಸಾಮಾಜಿಕ ಮಾಧ್ಯಮ ಖಾತೆಗಳ ಮೇಲೆ ಗಮನ ಕೇಂದ್ರೀಕರಿಸಿದೆ. ಎಪ್ರಿಲ್ 6ರಿಂದ ಸಿಎಸಿ 1,07,000 ಆನ್‍ಲೈನ್ ಖಾತೆಗಳನ್ನು ಮುಚ್ಚಿದೆ ಹಾಗೂ 8,35,000 ನಕಲಿ ಸುದ್ಧಿಗಳನ್ನು ಅಳಿಸಿಹಾಕಿದೆ ಎಂದು ಹೇಳಿಕೆ ತಿಳಿಸಿದೆ.
`ನಕಲಿ ನ್ಯೂಸ್ ಸ್ಟುಡಿಯೋ ದೃಶ್ಯಗಳು, ವೃತ್ತಿಪರ ಸುದ್ಧಿನಿರೂಪಕರಂತೆ ನಟಿಸುವುದು, ಕೃತಕ ಬುದ್ಧಿಮತ್ತೆ(ಆರ್ಟಿಫೀಷಿಯಲ್ ಇಂಟಲಿಜೆನ್ಸ್) ಬಳಸಿ ನಕಲಿ ಸುದ್ದಿಗಳನ್ನು ಪ್ರಸಾರ ಮಾಡಿ ಸಾರ್ವಜನಿಕರನ್ನು ದಾರಿತಪ್ಪಿಸುವುದನ್ನು ಪತ್ತೆಹಚ್ಚಲಾಗಿದೆ. ಇಂಟರ್ ನೆಟ್ ಬಳಕೆದಾರರ ಕಾನೂನುಬದ್ಧ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ಕಾಪಾಡಲು ಸಿಎಸಿ ಆನ್‍ಲೈನ್ ವೇದಿಕೆಗಳಿಗೆ ಮಾರ್ಗದರ್ಶನ ನೀಡಲಿದೆ' ಎಂದು ಸಿಎಸಿ ವೆಬ್‍ಸೈಟ್‍ನಲ್ಲಿ ಉಲ್ಲೇಖಿಸಲಾಗಿದೆ.