ಉಡುಪಿ: ಕಸಾಪದಿಂದ ಹಿರಿಯರೆಡೆಗೆ ಸಾಹಿತ್ಯದ ನಡಿಗೆ

ಉಡುಪಿ, ಮೇ 17: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಹಾಗೂ ಉಡುಪಿ ತಾಲೂಕು ಘಟಕದಿಂದ ‘ಹಿರಿಯರೆಡೆಗೆ ಸಾಹಿತ್ಯದ ನಡಿಗೆ’ ಕಾರ್ಯಕ್ರಮ ಮಣಿಪಾಲದಲ್ಲಿ ನಡೆಯಿತು. 91 ವರ್ಷದ ಹಿರಿಯರಾದ ವಿಠಲ ರಾವ್ ಗಂಭೀರ್ ಅವರನ್ನು ಅವರ ಸ್ವಗೃಹ ಮಣಿಪಾಲದಲ್ಲಿ ಗೌರವಿಸಲಾಯಿತು.
ರಾಜ್ಯ ಸರಕಾರದಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ ವಿಠಲ್ ರಾವ್ ಅವರು ಕನ್ನಡ ನಾಡು ನುಡಿ ಸಂಸ್ಕೃತಿಗೆ ಅನನ್ಯ ಸೇವೆ ಸಲ್ಲಿಸಿದ್ದಾರೆ. ಎಂಟು ವಿವಿಧ ವಾದ್ಯಗಳನ್ನು ನುಡಿಸಬಲ್ಲ ಇವರು ಸುಮಾರು 50ಕ್ಕೂ ಹೆಚ್ಚು ಪುಸ್ತಕ ಗಳನ್ನು ಬರೆದಿದ್ದಾರೆ. ಜ್ಯೋತಿಷ್ಯ ಶಾಸ್ತ್ರದಲ್ಲೂ ಪರಿಣಿತರಾಗಿರುವ ವಿಠಲ್ ರಾವ್ ಅವರನ್ನು ಗೌರವಿಸುವುದು ನಮ್ಮ ಭಾಗ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರು ಈ ಸಂದರ್ಭದಲ್ಲಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಹಿರಿಯರಾದ ಉಪೇಂದ್ರ ಸೋಮಯಾಜಿ, ಭುವನಪ್ರಸಾದ್ ಹೆಗ್ಡೆ, ಚಂದ್ರಶೇಖರ ನಾವಡ ನರಸಿಂಹಮೂರ್ತಿ, ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ, ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ಹಾಗೂ ವಿಠಲ್ ರಾವ್ ಅವರ ಮಗ ಗಂಭೀರ್ ರಾಮಚಂದ್ರರಾವ್ ಉಪಸ್ಥಿತರಿದ್ದರು.





