ಭದ್ರತಾ ಏರ್ಪಾಡುಗಳ ಬಗ್ಗೆ ಹೊಸ ಸ್ಥಿತಿಗತಿ ವರದಿ ಸಲ್ಲಿಸಿ: ಮಣಿಪುರಕ್ಕೆ ಸುಪ್ರೀಂ ಕೋರ್ಟ್ ಸೂಚನೆ
ರಾಜಕೀಯ ನಾಯಕತ್ವವು ಕುರುಡಾಗಲು ಅವಕಾಶ ನೀಡುವುದಿಲ್ಲ ಎಂದ ನ್ಯಾಯಾಲಯ

ಹೊಸದಿಲ್ಲಿ, ಮೇ 17: ಹಿಂಸಾಗ್ರಸ್ತ ಮಣಿಪುರದಲ್ಲಿ ಕಾನೂನು ಮತ್ತು ವ್ಯವಸ್ಥೆ ಪರಿಸ್ಥಿತಿ ಬಗ್ಗೆ ರಾಜಕೀಯ ನಾಯಕತ್ವವು ಕುರುಡಾಗಲು ಅವಕಾಶ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ ಹಾಗೂ ರಾಜ್ಯದಲ್ಲಿ ಹಿಂಸೆಯಿಂದ ತತ್ತರಿಸಿದ ಜನರ ಭದ್ರತೆ ಮತ್ತು ನೆಮ್ಮದಿ ಹಾಗೂ ಪುನರ್ವಸತಿಗಾಗಿ ತೆಗೆದುಕೊಂಡ ಕ್ರಮಗಳ ಹೊಸ ಸ್ಥಿತಿಗತಿ ವರದಿಯೊಂದನ್ನು ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿದೆ.
ಬಹುಸಂಖ್ಯಾತ ಮೇಟಿ ಸಮುದಾಯಕ್ಕೆ ಮೀಸಲಾತಿ ನೀಡುವುದಕ್ಕೆ ಸಂಬಂಧಿಸಿ ಮಣಿಪುರ ಹೈಕೋರ್ಟ್ ನೀಡಿರುವ ತೀರ್ಪಿನಿಂದ ಉದ್ಭವಿಸಿರುವ ಕಾನೂನು ವಿಷಯಗಳ ಬಗ್ಗೆ ತಾನು ವ್ಯವಹರಿಸುವುದಿಲ್ಲ, ಯಾಕೆಂದರೆ ಆ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಅದೇ ನ್ಯಾಯಾಲಯದ ವಿಸ್ತೃತ ಪೀಠವೊಂದು ನಡೆಸುತ್ತಿದೆ ಎಂದು ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ಹೇಳಿದೆ. ಈ ಪೀಠದಲ್ಲಿ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಜೆ.ಬಿ. ಪರ್ದಿವಾಲಾ ಸದಸ್ಯರಾಗಿದ್ದಾರೆ.
‘‘ಕಾನೂನು ಮತ್ತು ವ್ಯವಸ್ಥೆ ರಾಜ್ಯಕ್ಕೆ ಒಳಪಟ್ಟ ವಿಷಯವಾಗಿದೆ. ಇದರ ಬಗ್ಗೆ ರಾಜ್ಯದ ರಾಜಕೀಯ ನಾಯಕತ್ವವು ಕುರುಡಾಗದಂತೆ ನೋಡಿಕೊಳ್ಳುವ ಕೆಲಸವನ್ನು ಭಾರತದ ಸುಪ್ರೀಂ ಕೋರ್ಟ್ ಆಗಿ ನಾವು ಮಾಡುತ್ತೇವೆ’’ ಎಂದು ಪೀಠ ಹೇಳಿತು.
ರಾಜ್ಯದಲ್ಲಿರುವ ಕುಕಿ ಮತ್ತು ಇತರ ಬುಡಕಟ್ಟು ಸಮುದಾಯಗಳ ಭದ್ರತಾ ಕಳವಳಗಳನ್ನು ಸುಪ್ರೀಂ ಕೋರ್ಟ್ ಗಣನೆಗೆ ತೆಗೆದುಕೊಂಡಿತು. ಬುಡಕಟ್ಟು ಸಮುದಾಯಗಳು ಸೂಚಿಸಿರುವ ಗ್ರಾಮಗಳಲ್ಲಿನ ಪರಿಸ್ಥಿತಿಯನ್ನು ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಅವರ ಭದ್ರತಾ ಸಲಹೆಗಾರ ಪರಿಶೀಲಿಸಬೇಕು ಹಾಗೂ ‘‘ಶಾಂತಿ ಮತ್ತು ನೆಮ್ಮದಿ’’ಯನ್ನು ಸ್ಥಾಪಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯ ಆದೇಶ ನೀಡಿತು.
ಹಿಂಸಾಪೀಡಿತ ಜನರಿಗೆ ನೀಡಲಾಗಿರುವ ಪರಿಹಾರ, ಭದ್ರತೆ ಮತ್ತು ಪುನರ್ವಸತಿ ಕ್ರಮಗಳ ಬಗ್ಗೆ ಹೊಸ ಸ್ಥಿತಿಗತಿ ವರದಿಯೊಂದನ್ನು ಸಲ್ಲಿಸುವಂತೆ ನ್ಯಾಯಾಲಯವು ರಾಜ್ಯ ಸರಕಾರಕ್ಕೆ ಸೂಚಿಸಿತು.
ಮಣಿಪುರದ ಬೆಟ್ಟಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನರು ಮತ್ತು ಇಂಫಾಲ್ ಕಣಿವೆಯಲ್ಲಿ ವಾಸಿಸುತ್ತಿರುವ ಬಹುಸಂಖ್ಯಾತ ಮೇಟಿ ಸಮುದಾಯದ ಜನರ ನಡುವೆ ನಡೆದ ಹಿಂಸಾತ್ಮಕ ಸಂಘರ್ಷದಲ್ಲಿ 50ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ತನಗೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡಬೇಕು ಎಂದು ಮೇಟಿ ಸಮುದಾಯ ಒತ್ತಾಯಿಸಿದರೆ, ಕುಕಿ ಸೇರಿದಂತೆ ಇತರ ಬುಡಕಟ್ಟು ಸಮುದಾಯಗಳು ಅದನ್ನು ವಿರೋಧಿಸುತ್ತಿವೆ.







