ಮಕ್ಕಳ ಮೇಲಿನ ದೌರ್ಜನ್ಯ ಸಮಾಜದ ವಿರುದ್ಧದ ಅಪರಾಧ: ಹೈಕೋರ್ಟ್

ಬೆಂಗಳೂರು, ಮೇ 17: ಮಕ್ಕಳ ಮೇಲೆ ಎಸಗುವ ಲೈಂಗಿಕ ದೌರ್ಜನ್ಯ ಸಮಾಜದ ವಿರುದ್ಧದ ಅಪರಾಧವಾಗಿರುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿರುವ ಹೈಕೋರ್ಟ್, ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ವ್ಯಕ್ತಿಯೊಬ್ಬನನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ರದ್ದುಪಡಿಸಿ, ಆತನಿಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.
ಆರೋಪಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಿ ಮೈಸೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಹುಣಸೂರು ಠಾಣೆ ಪೊಲೀಸರು ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ಮಾನ್ಯ ಮಾಡಿರುವ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಈ ಆದೇಶ ನೀಡಿದೆ.
ಅಲ್ಲದೆ, ಮಕ್ಕಳ ಮೇಲೆ ಎಸಗುವ ಲೈಂಗಿಕ ದೌರ್ಜನ್ಯ ಕೇವಲ ಮಕ್ಕಳ ವಿರುದ್ಧವಲ್ಲದೆ ಇಡೀ ಸಮಾಜದ ವಿರುದ್ಧದ ಅಪರಾಧವಾಗಿರುತ್ತದೆ ಎಂದು ನ್ಯಾಯಪೀಠವು ಆಕ್ಷೇಪ ವ್ಯಕ್ತಪಡಿಸಿದೆ.
ಕೃತ್ಯವೆಸಗಿದ ಬಳಿಕ ಸಂತ್ರಸ್ತೆಯನ್ನೇ ಮದುವೆಯಾಗಿ ಒಂದು ಮಗುವನ್ನು ಪಡೆದಿದ್ದರೂ ಸಹ ಆರೋಪಿಯ ಬಗ್ಗೆ ಯಾವುದೇ ಉದಾರತೆ ತೋರಲು ನಿರಾಕರಿಸಿರುವ ಹೈಕೋರ್ಟ್, ಆರೋಪಿಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ.
ಆರೋಪಿಯ ವಿರುದ್ಧ ಸಾಕ್ಷ್ಯಾಧಾರಗಳಿಲ್ಲ ಎಂಬ ತೀರ್ಮಾನಕ್ಕೆ ಬಂದು ಆತನನ್ನು ಖುಲಾಸೆಗೊಳಿಸಿದ ವಿಚಾರಣಾ ಕೋರ್ಟ್‍ನ ಕ್ರಮ ಕಾನೂನುಬಾಹಿರವಾಗಿದೆ ಎಂದು ಅಭಿಪ್ರಾಯಪಟ್ಟಿದೆ.







