ಜಲ್ಲಿಕಟ್ಟುವಿಗೆ ಅವಕಾಶ ನೀಡುವ ತಮಿಳುನಾಡು ಸರಕಾರದ ಕಾನೂನಿನ ಸಿಂಧುತ್ವವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ: ರಾಜ್ಯದ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟುವಿಗೆ ಅವಕಾಶ ನೀಡುವ ತಮಿಳುನಾಡು ಸರಕಾರದ ಕಾನೂನಿನ ಸಿಂಧುತ್ವವನ್ನು ಸುಪ್ರೀಂಕೋರ್ಟ್ ಗುರುವಾರ ಎತ್ತಿಹಿಡಿದಿದೆ.
"ಶಾಸಕಾಂಗವು 'ಜಲ್ಲಿಕಟ್ಟು' ತಮಿಳುನಾಡಿನ ಸಾಂಸ್ಕೃತಿಕ ಪರಂಪರೆಯ ಭಾಗವಾಗಿದೆ ಎಂದು ಘೋಷಿಸಿದಾಗ, ನ್ಯಾಯಾಂಗವು ವಿಭಿನ್ನ ದೃಷ್ಟಿಕೋನವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ" ಎಂದು ನ್ಯಾಯಮೂರ್ತಿ ಕೆ. ಎಂ. ಜೋಸೆಫ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ನ್ಯಾಯಪೀಠ ಹೇಳಿದೆ.
ಸಾಂಪ್ರದಾಯಿಕವಾಗಿ ತಮಿಳುನಾಡಿನಲ್ಲಿ ಸುಗ್ಗಿಯ ಹಬ್ಬ ಪೊಂಗಲ್ ಅಂಗವಾಗಿ ಗೂಳಿಗಳೊಂದಿಗೆ ಹೋರಾಡುವ 'ಜಲ್ಲಿಕಟ್ಟು' ಕ್ರೀಡೆಯನ್ನು ಆಡಲಾಗುತ್ತದೆ.
ಪ್ರಾಣಿಗಳ ಕ್ರೌರ್ಯವನ್ನು ತಡೆಗಟ್ಟುವ (ತಮಿಳುನಾಡು ತಿದ್ದುಪಡಿ) ಕಾಯ್ದೆ, 2017 "ಕ್ರೀಡೆಗಳಲ್ಲಿ ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ" ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸಾಂಪ್ರದಾಯಿಕ ಕ್ರೀಡೆಗಳಾದ 'ಜಲ್ಲಿಕಟ್ಟು' ಹಾಗೂ ಎತ್ತಿನಗಾಡಿ ಓಟಗಳಿಗೆ ಅವಕಾಶ ನೀಡುವ ತಮಿಳುನಾಡು ಮತ್ತು ಮಹಾರಾಷ್ಟ್ರ ಸರಕಾರದ ಕಾನೂನುಗಳನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳನ್ನು ಐವರು ಸದಸ್ಯರ ನ್ಯಾಯಪೀಠ ಆಲಿಸಿತು. ಎಲ್ಲ ಅರ್ಜಿಗಳನ್ನು ವಜಾಗೊಳಿಸಿದೆ.







