ಮಣಿಪುರ ಹಿಂಸಾಚಾರ ವೇಳೆ ಲೂಟಿಗೈದ ಶಸ್ತ್ರಗಳ ಬಗ್ಗೆ ಹೆಚ್ಚಿದ ಆತಂಕ: ಪ್ರತ್ಯೇಕ ಆಡಳಿತಕ್ಕೆ ಬೇಡಿಕೆಯಿಟ್ಟ 10 ಶಾಸಕರು
ಹೊಸದಿಲ್ಲಿ: ಮಣಿಪುರದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದಲ್ಲಿ ಪ್ರಮುಖವಾಗಿ ಮೀಟೀ ಗುಂಪುಗಳು ಲೂಟಿಗೈದ ಶಸ್ತ್ರಾಸ್ತ್ರಗಳು ಭದ್ರತಾ ಪಡೆಗಳ ಕಳವಳಕ್ಕೆ ಕಾರಣವಾಗಿದೆ. ಈ ಶಸ್ತ್ರಾಸ್ತ್ರಗಳು ಪಿಎಲ್‌ಎ ನಂತಹ ತೀವ್ರಗಾಮಿ ಗುಂಪುಗಳ ಕೈಗೆ ದೊರೆಯಬಹುದೆಂಬ ಭೀತಿ ವ್ಯಕ್ತವಾಗಿದೆ.
ಮಣಿಪುರ ಪೊಲೀಸ್ ತರಬೇತಿ ಕಾಲೇಜು, ಎರಡು ಪೊಲೀಸ್ ಠಾಣೆ ಹಾಗೂ ಇಂಫಾಲ್‌ನಲ್ಲಿರುವ ಐಆರ್‌ಬಿ ಬೆಟಾಲಿಯನ್ ಶಿಬಿರದಿಂದ 1000 ಶಸ್ತ್ರಾಸ್ತ್ರಗಳು ಹಾಗೂ 10,000 ಸುತ್ತು ಬುಲೆಟ್‌ಗಳನ್ನು ಲೂಟಿಗೈಯ್ಯಲಾಗಿದೆ ಎಂದು ವರದಿಯಾಗಿದೆ.
ಚುರಚಂದಪುರ ಎಂಬಲ್ಲಿ ಕುಕೀಗಳು ಪೊಲೀಸ್ ಠಾಣೆಗಳ ಮೇಲೆ ದಾಳಿಗೈದು ಲೂಟಿಗೈದಿದ್ದರೆನ್ನಲಾಗಿದೆ. ಈ ಶಸ್ತ್ರಾಸ್ತ್ರಗಳನ್ನು ಶೀಘ್ರ ವಶಪಡಿಸಿಕೊಳ್ಳದೇ ಇದ್ದರೆ ಸಮಸ್ಯೆ ಸೃಷ್ಟಿಯಾಗಬಹುದೆಂಬ ಭಯವಿದೆ.
ಲೂಟಿಗೈದ ಶಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳುವುದನ್ನು ನಿಲ್ಲಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ತನಗೆ ಅನಾಮಧೇಯ ಕರೆಗಳು ಬರುತ್ತಿವೆ ಎಂದು ನಾಗರಿಕ ಸಮಾಜ ಸಂಸ್ಥೆಗಳ ಒಕ್ಕೂಟವಾಗಿರುವ ಕೊ-ಆರ್ಡಿನೇಟಿಂಗ್ ಕಮಿಟಿ ಆನ್ ಮಣಿಪುರ್ ಇಂಟೆಗ್ರಿಟಿ ಹೇಳಿದೆ.
ಇಲ್ಲಿಯ ತನಕ 456 ಶಸ್ತ್ರಾಸ್ತ್ರಗಳು ಮತ್ತು 6,670 ಇತರ ಅಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿಂಸಾ ನಂತರ ಮಣಿಪುರ ಸರ್ಕಾರಕ್ಕೆ ಮಾರ್ಗದರ್ಶನ ನೀಡುತ್ತಿರುವ ಮಾಜಿ ಸಿಆರ್‌ಪಿಎಫ್ ಡಿಜಿ ಕುಲದೀಪ್ ಸಿಂಗ್ ತಿಳಿಸಿದ್ದಾರೆ.
ಪ್ರತ್ಯೇಕ ಆಡಳಿತಕ್ಕೆ ಆಗ್ರಹ: ಈ ನಡುವೆ ಮಣಿಪುರದ ಚಿನ್-ಕುಕಿ-ಮಿಝೊ-ಝೋಮಿ-ಹ್ಮರ್ ಸಮುದಾಯಗಳ 10 ಶಾಸಕರು, ಪ್ರತ್ಯೇಕ ಆಡಳಿತಕ್ಕೆ ಬೇಡಿಕೆಯನ್ನು ಪುನರುಚ್ಛರಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಬರೆದ ಪತ್ರದಲ್ಲಿ ಅವರು, ರಾಜ್ಯದ ಜನರು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಜೊತೆಯಾಗಿ ವಾಸಿಸಲು ಸಾಧ್ಯವಿಲ್ಲ, ಪ್ರತ್ಯೇಕ ಆಡಳಿತ ಬೇಕೆಂದೂ ಅವರು ಆಗ್ರಹಿಸಿದ್ದಾರೆ.