ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಶಾಸಕ ಡಾ. ಜಿ. ಪರಮೇಶ್ವರ್ ಪಟ್ಟು
ಬೆಂಗಳೂರು, ಮೇ, 18: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮಾದರಿಯಲ್ಲಿ ತಮಗೂ ಉಪಮುಖ್ಯಮಂತ್ರಿ (ಡಿಸಿಎಂ) ಸ್ಥಾನ ನೀಡಬೇಕು’ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಕ್ಷೇತ್ರದ ನೂತನ ಶಾಸಕ ಡಾ.ಜಿ.ಪರಮೇಶ್ವರ್ ಅವರು ಆಗ್ರಹಿಸಿದ್ದಾರೆ.
ಗುರುವಾರ ಇಲ್ಲಿನ ಸದಾಶಿವ ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಕ್ಷ ಅಧಿಕಾರಕ್ಕೆ ಬರಲು ಎಲ್ಲರೂ ಕೊಡುಗೆ ನೀಡಿದ್ದಾರೆ. ಒಬ್ಬರೆ ಉಪ ಮುಖ್ಯಮಂತ್ರಿ ಆಗಿರಬೇಕೆಂದು ಹೇಳಲು ಬರುವುದಿಲ್ಲ. ಡಿ.ಕೆ.ಶಿವಕುಮಾರ್ ಅಭಿಪ್ರಾಯ ಹೇಳಿರುತ್ತಾರೆ. ಎಲ್ಲರೂ ಒಟ್ಟಿಗೆ ಇದ್ದೇವೆ. ಎಲ್ಲರೂ ಸೇರಿ ಅಧಿಕಾರ ನಡೆಸುತ್ತೇವೆ’ ಎಂದು ಸ್ಪಷ್ಟಪಡಿಸಿದರು.
ಸರಕಾರದಲ್ಲಿ ದಲಿತರ ಪ್ರಾತಿನಿಧ್ಯ ಹೇಗಿರಲಿದೆ ಎಂದು ನೋಡಬೇಕಿದೆ. ಪರಿಶಿಷ್ಟರಿಗೆ ಮೀಸಲಾದ ಒಟ್ಟು 51 ಕ್ಷೇತ್ರಗಳ ಪೈಕಿ 37 ಕ್ಷೇತ್ರಗಳಲ್ಲಿ ಪಕ್ಷದಿಂದ ಸ್ಪರ್ಧಿಸಿದವರು ಗೆದ್ದಿದ್ದೇವೆ. ಬೇರೆ ಕ್ಷೇತ್ರಗಳಲ್ಲೂ ದಲಿತ ಸಮುದಾಯದ ಮತಗಳು ಫಲಿತಾಂಶದ ಮೇಲೆ ಪರಿಣಾಮ ಬೀರಿವೆ ಎಂದು ಪರಮೇಶ್ವರ್ ವಿವರಣೆ ನೀಡಿದರು.
‘ನಾವು ಶಿಸ್ತಿನ ಸಿಪಾಯಿಗಳು, ಲಾಬಿ ಮಾಡುವುದಿಲ್ಲ. ಆದರೆ, ಯಾವ ಸಮುದಾಯದ ಬೆಂಬಲ ದೊರಕಿದೆ ಎಂಬುದನ್ನು ಹೈಕಮಾಂಡ್ ಅರ್ಥ ಮಾಡಿಕೊಳ್ಳಬೇಕು. ರಾಜಸ್ಥಾನದ ರೀತಿ ಇಲ್ಲಿ ಆಗಲು ಬಿಡುವುದಿಲ್ಲ. ಸರಕಾರ ಒಳ್ಳೆಯ ಆಡಳಿತ ನೀಡುವ ನಿರೀಕ್ಷೆ ಜನರಲ್ಲಿದೆ ಎಂದು ಡಾ. ಪರಮೇಶ್ವರ್ ಹೇಳಿದರು.