ಮಳೆಯಲ್ಲೂ 5,000 ಮೀಟರ್ ಓಟ ಪೂರ್ಣಗೊಳಿಸಿದ ಕಾಂಬೋಡಿಯನ್ ಕ್ರೀಡಾಪಟು: ವೀಡಿಯೊ ವೈರಲ್

ಕಾಂಬೋಡಿಯ: ಸುರಿಯುವ ಮಳೆಯಲ್ಲೂ ತನ್ನ 5,000 ಮೀಟರ್ ಓಟವನ್ನು ಪೂರ್ಣಗೊಳಿಸಿದ ಕಾಂಬೋಡಿಯನ್ ಓಟಗಾರ್ತಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದಾರೆ.
ಬೌ ಸಮ್ನಾಂಗ್ ಅವರ ಸಮರ್ಪಣಾಭಾವ ಹಾಗೂ ಕಠಿಣ ಪ್ರಯತ್ನವನ್ನು ತೋರಿಸುವ ಕ್ಲಿಪ್ ಅನ್ನು ಒಲಿಂಪಿಕ್ಸ್ ಕ್ರೀಡಾಕೂಟ ಸೇರಿದಂತೆ ಟ್ವಿಟರ್‌ನಲ್ಲಿ ಹಲವಾರು ಹ್ಯಾಂಡಲ್‌ಗಳಿಂದ ಪೋಸ್ಟ್ ಮಾಡಲಾಗಿದೆ. ಸುಮಾರು 7 ಲಕ್ಷ ಜನರು ಇದನ್ನು ವೀಕ್ಷಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ಆಗ್ನೇಯ ಏಷ್ಯಾದ ಕ್ರೀಡಾಕೂಟದಲ್ಲಿ ಧಾರಾಕಾರ ಮಳೆಯು ಆರಂಭವಾದಾಗಲೂ ಟ್ರ್ಯಾಕ್‌ನಲ್ಲಿ ಸಮ್ಮಾಂಗ್ ಈ ಸಾಧನೆ ಮಾಡಿದ್ದಾರೆ.
"ಹವಾಮಾನ ಮುನ್ಸೂಚನೆಯಲ್ಲಿ ಮಳೆಯ ಬಗ್ಗೆ ತಿಳಿದಿದ್ದೆ. ಆದರೆ ಅಷ್ಟು ಮಳೆ ಬೀಳಲಿದೆ ಎಂದು ತಿಳಿದಿರಲಿಲ್ಲ. ಗುಡುಗು-ಮಿಂಚಿನ ಜೊತೆಗೆ ತುಂಬಾ ಮಳೆ ಹಾಗೂ ಗಾಳಿ ಬೀಸಿತು " ಎಂದು ಮೇ 8 ರಂದು ನಡೆದ ಓಟದ ಬಗ್ಗೆ ಒಲಿಂಪಿಕ್ಸ್.ಕಾಂನೊಂದಿಗೆ ಮಾತನಾಡಿದ ಎಂ.ಎಸ್. ಸಮ್ನಾಂಗ್ ತಿಳಿಸಿದರು.
ಓಟವನ್ನು ಪೂರ್ಣಗೊಳಿಸಿದ ನಂತರ 20 ರ ಹರೆಯದ ಓಟಗಾರ್ತಿ ಭಾವುಕರಾಗಿದ್ದರು, ವಿಯೆಟ್ನಾಂನ ಥಿ ಓನ್ಹ್ ರೇಸ್ ನಲ್ಲಿ ಜಯಶಾಲಿಯಾದರು. ಅವರು ಕಾಂಬೋಡಿಯ ಓಟಗಾರ್ತಿಗಿಂತ ಆರು ನಿಮಿಷಗಳ ಮೊದಲು ಅಂತಿಮ ಗೆರೆಯನ್ನು ದಾಟಿದರು.
"ನಾನು ಹೊಂದಿದ್ದ ಪ್ರೇಕ್ಷಕರ ಬೆಂಬಲದಿಂದಾಗಿ ಹಾಗೂ ನಾನು ಕಾಂಬೋಡಿಯಾವನ್ನು ಪ್ರತಿನಿಧಿಸುತ್ತಿದ್ದೇನೆ ಎಂಬ ಕಾರಣದಿಂದಾಗಿ ಓಟವನ್ನು ಮುಗಿಸುವುದು ನನಗೆ ಮುಖ್ಯವಾಗಿತ್ತು. ನನಗೆ ಓಟವನ್ನು ನಿಲ್ಲಿಸುವ ಹಕ್ಕಿದ್ದರೂ ನಾನು ಹಾಗೆ ಮಾಡಲಿಲ್ಲ’’ ಎಂದು ಎಂ.ಎಸ್. ಸಮ್ನಾಂಗ್ ಹೇಳಿದರು.
ರಕ್ತಹೀನತೆಯಿಂದ ಬಳಲುತ್ತಿದ್ದ ಕ್ರೀಡಾಪಟು ಆ ದಿನ ತಾನು ಆರೋಗ್ಯವಂತಳಾಗಿರಲಿಲ್ಲ ಎಂದು ಒಪ್ಪಿಕೊಂಡರು.