ಸೋಲಿಗೆ ಎದೆಗುಂದಬೇಡಿ, ಸ್ಥಳೀಯ ಸಂಸ್ಥೆ ಚುನಾವಣೆಗೆ ಸಿದ್ಧರಾಗಿ: JDS ಕಾರ್ಯಕರ್ತರಿಗೆ ಎಚ್.ಡಿ.ದೇವೇಗೌಡ ಪತ್ರ

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ದೊರೆತಿರುವ ಫಲಿತಾಂಶದಿಂದ ಯಾರೂ ಎದೆಗುಂದಬಾರದು. ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆ ಚುನಾವಣೆಗೆ ಮತ್ತೆ ಎಲ್ಲರೂ ಸೇರಿ ಪಕ್ಷ ಸಂಘಟನೆ ಮಾಡಿ ಬಲ ತುಂಬುವ ಕೆಲಸ ಮಾಡಬೇಕಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಈ ಬಗ್ಗೆ ಪಕ್ಷದ ಮುಖಂಡರಿಗೆ ಪತ್ರ ಬರೆದಿರುವ ಅವರು, ಪ್ರಜಾಪ್ರಭುತ್ವದ ಚುನಾವಣೆ ವ್ಯವಸ್ಥೆಯಲ್ಲಿ ಏಳು-ಬೀಳು ಸಹಜ. ಆದರೆ, ಪಕ್ಷಕ್ಕೆ ದೊರೆತಿರುವ ಫಲಿತಾಂಶದಿಂದ ಯಾರೂ ಎದೆಗುಂದಬಾರದು. ಈ ಬಾರಿಯ ಚುನಾವಣೆ ಫಲಿತಾಂಶ ನಿರೀಕ್ಷಿತ ಮಟ್ಟಕ್ಕೆ ಬಂದಿಲ್ಲ. ಇದು ನಮ್ಮೆಲ್ಲರಿಗೂ ಅಚ್ಚರಿ ಮತ್ತು ನಿರಾಶೆ ಮೂಡಿಸಿದೆ. ಎಚ್.ಡಿ.ಕುಮಾರಸ್ವಾಮಿ ಅವರು ಎರಡು ವರ್ಷಗಳಿಂದ ಜನತಾಪರ್ವ ಹಾಗೂ ಪಂಚರತ್ನ ಕಾರ್ಯಕ್ರಮ ಜನರ ಮುಂದಿಟ್ಟು ರಾಜ್ಯ ಪ್ರವಾಸ ಮಾಡಿದಾಗ ಸಾವಿರಾರು ಜನರು ಸೇರಿ ಬೆಂಬಲ ಸೂಚಿಸಿದರು. ಆದರೂ, ಚುನಾವಣೆಯಲ್ಲಿ ಯಶಸ್ಸು ಸಿಗಲಿಲ್ಲ ಎಂದು ಹೇಳಿದ್ದಾರೆ.
ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹಾಗೂ 90ರ ವಯಸ್ಸಿನಲ್ಲಿ ಆರೋಗ್ಯ ಸ್ಥಿತಿ ಅಷ್ಟು ಸಹಜವಾಗಿ ಇಲ್ಲದಿದ್ದರೂ ನಾನೂ ಸಹ ಹಲವಾರು ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡರೂ ಮತದಾರರು ನಮ್ಮ ಅಭ್ಯರ್ಥಿಗಳನ್ನು ಬೆಂಬಲಿಸಲಿಲ್ಲ.
ಆದರೆ, ಪಕ್ಷ, ರಾಜ್ಯಾಧ್ಯಕ್ಷರು, ನಾನೂ ಒಳಗೊಂಡಂತೆ ಎಲ್ಲರೂ ಸದಾ ಕಾಲ ನಿಮ್ಮ ನೆರವಿಗೆ ಮತ್ತು ಬೆಂಬಲಕ್ಕೆ ನಿಲ್ಲುತ್ತೇವೆ ಎಂಬ ಆಶ್ವಾಸನೆ ನೀಡಿದ್ದಾರೆ.









