ವೇಗಿ ಮುಹಮ್ಮದ್ ಸಿರಾಜ್ ರ ಹೊಸ ಮನೆಗೆ ಭೇಟಿ ನೀಡಿದ ಆರ್‌ಸಿಬಿ ಆಟಗಾರರು

ಹೈದರಾಬಾದ್: 29 ವರ್ಷದ ಭಾರತದ ಸ್ಟಾರ್ ವೇಗದ ಬೌಲರ್ ಮುಹಮ್ಮದ್ ಸಿರಾಜ್ ಹೈದರಾಬಾದಿನ ಫಿಲ್ಮ್ ನಗರದಲ್ಲಿ ತಮ್ಮ ಕನಸಿನ ಮನೆಯನ್ನು ಕೊನೆಗೂ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ತಮ್ಮ ಗೃಹ ಪ್ರವೇಶಕ್ಕೆ ಆರ್‌ಸಿಬಿ ತಂಡದ ಸಹ ಆಟಗಾರರನ್ನೂ ಆಹ್ವಾನಿಸಿ ಅವರಿಗೆಲ್ಲ ಭಾರಿ ಔತಣ ಕೂಟ ಒದಗಿಸಿದ್ದಾರೆ ಎಂದು cricktracker.com ವರದಿ ಮಾಡಿದೆ.
ಇತ್ತೀಚೆಗೆ ಈ ಕಾರ್ಯಕ್ರಮದ ವಿಡಿಯೊವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಯೂಟ್ಯೂಬ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಿರಾಜ್ ತಮ್ಮ ನೂತನ ನಿವಾಸದಲ್ಲಿ ಸಹ ಆಟಗಾರರೊಂದಿಗೆ ಮಾತನಾಡುತ್ತಿರುವುದು ಹಾಗೂ ಔತಣ ಕೂಟಕ್ಕೆ ಹಾಜರಾಗಿದ್ದಕ್ಕೆ ಧನ್ಯವಾದ ಹೇಳುತ್ತಿರುವುದನ್ನು ಕಾಣಬಹುದಾಗಿದೆ.
ಆ ವಿಡಿಯೊದಲ್ಲಿ, "ನನ್ನ ಕನಸಿನ ಮನೆ ನಿರ್ಮಿಸಲು ಬಯಕೆ ಈಡೇರಿದೆ. ಆರ್‌ಸಿಬಿ ತಂಡ ಇಲ್ಲಿಗೆ ಬರುವ ವೇಳೆಗೆ ಮನೆ ನಿರ್ಮಾಣ ಪೂರ್ಣಗೊಳ್ಳಲಿ ಎಂದು ಆಶಿಸಿದ್ದೆ. ತಂಡ ಬಂದು ಸಂತೋಷ ಪಟ್ಟಿದ್ದಕ್ಕೆ ನನಗೆ ಸಂತಸವಾಗಿದೆ. ನನಗೆ ತುಂಬಾ ಹೆಮ್ಮೆಯಾಗಿದ್ದು, ನಾನು ಆರ್‌ಸಿಬಿ ಆಡಳಿತ ಮಂಡಳಿ ಹಾಗೂ ತಂಡವು ಭೇಟಿ ನೀಡಿದ್ದಕ್ಕೆ ಧನ್ಯವಾದ ಅರ್ಪಿಸುತ್ತೇನೆ.
ನಾನು ಕೊಂಚ ಭೀತನೂ ಆಗಿದ್ದೇನೆ. ನಾನೇ ಆತಿಥ್ಯ ನೀಡುವವನಾಗಿರುವುದರಿಂದ ತಂಡದ ಉಪಚಾರದಲ್ಲಿ ಯಾವುದೇ ಕೊರತೆಯಾಗಬಾರದೆಂದು ಬಯಸುತ್ತೇನೆ. ಆದರೆ, ಇದು ಒಳ್ಳೆಯ ಸಂದರ್ಭವಾಗಿದೆ" ಎಂದು ಹೇಳುತ್ತಿರುವುದು ವೀಡಿಯೋದಲ್ಲಿದೆ. ಈ ಹಿಂದೆಯೂ ಹೈದರಾವಬಾದ್ ನಲ್ಲಿ ಪಂದ್ಯಾಟವಿದ್ದ ವೇಳೆ ಆರ್ಸಿಬಿ ಆಟಗಾರರು ಸಿರಾಜ್ ಮನೆಗೆ ಭೇಟಿ ನೀಡಿ ಬಿರಿಯಾನಿ ಸವಿದಿದ್ದರು.
Virat Kohli, Faf Du Plessis and other RCB players visited Mohammad Siraj's new house. pic.twitter.com/saYYluyIGc
— Mufaddal Vohra (@mufaddal_vohra) May 15, 2023