ಬಿಜೆಪಿ ಧ್ವಜದ ಮೇಲೆ ಗೋಹತ್ಯೆ: ವೈರಲ್ ವೀಡಿಯೊ ಹಿಂದಿನ ಸತ್ಯಾಂಶವೇನು?

ಹೊಸದಿಲ್ಲಿ: ಬಿಜೆಪಿ ಧ್ವಜದ ಮೇಲೆ ಹತ್ಯೆಗೀಡಾಗಿರುವ ದನವೊಂದು ಇರುವುದನ್ನು ತೋರಿಸುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಈ ಘಟನೆ ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಬಹುಮತದಿಂದ ಗೆದ್ದ ವಿಧಾನಸಭಾ ಚುನಾವಣೆ ನಡೆದ ಕರ್ನಾಟಕದಲ್ಲಿ ನಡೆದಿದೆ ಎಂದು ಹೇಳಲಾಗಿದೆ.
“ಖಾನ್-ಗ್ರೇಸ್ ವಿಜಯವನ್ನು ಕರ್ನಾಟಕದಲ್ಲಿ ಬಿಜೆಪಿ ಧ್ವಜದ ಮೇಲೆ ದನವೊಂದನ್ನು ಹತ್ಯೆಗೈದು ಆಚರಿಸಲಾಗುತ್ತಿದೆ,” ಎಂಬ ಶೀರ್ಷಿಕೆಯೊಂದಿಗೆ ಈ ವೀಡಿಯೋವನ್ನು ಹಲವಾರು ಮಂದಿ ಶೇರ್ ಮಾಡಿದ್ದಾರೆ.


ಈ ವೀಡಿಯೋ ಶೇರ್ ಮಾಡಿದ್ದವರೊಬ್ಬರನ್ನು ಕೇಂದ್ರ ಸಚಿವ ಪಿಯುಷ್ ಗೋಯಲ್ ಅವರ ಕಚೇರಿ ಮತ್ತು ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರೂ ಫಾಲೋ ಮಾಡುತ್ತಿದ್ದಾರೆ.

ಅಸಲಿಯತ್ತೇನು?
ಆದರೆ ಈ ವೀಡಿಯೋದ ಅಸಲಿಯತ್ತು ಬೇರೆಯೇ ಆಗಿದೆ. ಆಲ್ಟ್ ನ್ಯೂಸ್ ಇದರ ಅಸಲಿಯತ್ತನ್ನು ಬಹಿರಂಗಪಡಿಸಿದೆ. ಈ ಕುರಿತಂತೆ ಕೀವರ್ಡ್ ಶೋಧ ನಡೆಸಿದಾಗ ಈ ಘಟನೆ ಮಣಿಪುರದಲ್ಲಿ 2022 ವಿಧಾನಸಭಾ ಚುನಾವಣೆ ವೇಳೆ ನಡೆದಿದೆ ಎಂದು ತಿಳಿದು ಬರುತ್ತದೆ.


ಫೆಬ್ರವರಿ 2, 2022ರ ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಮಣಿಪುರ ವಿಧಾನಸಭಾ ಚುನಾವಣೆಯ 60 ಸೀಟುಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದ ಬೆನ್ನಲ್ಲೇ ಈ ವೀಡಿಯೋ ಅಂತರ್ಜಾಲದಲ್ಲಿ ಕಾಣಿಸಿಕೊಂಡಿತ್ತು. ಕೆಲ ಮಂದಿ ದನವೊಂದನ್ನು ಹತ್ಯೆಗೈದು ಅದರ ತಲೆಯ ಅಡಿಯಲ್ಲಿ ಬಿಜೆಪಿ ಧ್ವಜವಿಟ್ಟಿದ್ದರು. ಹಿನ್ನೆಲೆಯಲ್ಲಿ ಕೆಲ ಜನರು ಮಣಿಪುರದ ಆಗಿನ ಸೀಎಂ ಎನ್ ಬಿರೇನ್ ಸಿಂಗ್ ಮತ್ತು ಮಣಿಪುರ ಬಿಜೆಪಿ ಅಧ್ಯಕ್ಷ ಎ ಶಾರದಾ ದೇವಿ ಅವರನ್ನು ನಿಂದಿಸುವುದೂ ಕಾಣಿಸುತ್ತದೆ.

ಈ ವೀಡಿಯೋವನ್ನು ಹಲವರು ಕಳೆದ ವರ್ಷವೇ ಶೇರ್ ಮಾಡಿದ್ದರು. ಒಬ್ಬರು ತಮ್ಮ ಟ್ವೀಟ್ ಜೊತೆ ಆಗಿನ ಮುಖ್ಯಮಂತ್ರಿಯನ್ನೂ ಟ್ಯಾಗ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಆಗಿನ ಸೀಎಂ, ಬಿಜೆಪಿ ಅಭ್ಯರ್ಥಿಗಳ ಪಟ್ಟಿಯ ಮೇಲೆ ದನವನ್ನು ಹತ್ಯೆಗೈದ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದಿದ್ದರು.
ಈಸ್ಟ್ ಮೋಜೋ ಡಿಜಿಟಲ್ ಸುದ್ದಿ ತಾಣದ ವರದಿ ಪ್ರಕಾರ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ನಂತರ ಭುಗಿಲೆದ್ದ ಅಸಮಾಧಾನದಿಂದ ಈ ಘಟನೆ ನಡೆದಿದೆ ಎಂದು ವಿವರಿಸಲಾಗಿತ್ತು.







