ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು : ಅರುಣ್ ಕುಮಾರ್ ಪುತ್ತಿಲ
ಬಿಜೆಪಿ ನಾಯಕರ ಭಾವಚಿತ್ರಕ್ಕೆ ಚಪ್ಪಲಿ ಹಾರ ಪ್ರಕರಣ

ಪುತ್ತೂರು: ಬಿಜೆಪಿ ನಾಯಕರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿದ ಪ್ರಕರಣದಲ್ಲಿ ಬಂಧಿತ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಿರುವುದು ಅಕ್ಷಮ್ಯ ಅಪರಾಧವಾಗಿದ್ದು, ಸಮಾಜ ತಲೆ ತಗ್ಗಿಸುವ ವಿಚಾರವಾಗಿದೆ. ಹಲ್ಲೆ ನಡೆಸಿದ ಪೊಲೀಸ್ ಸಿಬ್ಬಂದಿ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ಮತ್ತು ಪ.ಜಾತಿ ಕಲ್ಯಾಣ ಇಲಾಖೆಗೆ ದೂರು ನೀಡಲಾಗುವುದು ಎಂದು ಅರುಣ್ ಕುಮಾರ್ ಪುತ್ತಿಲ ತಿಳಿಸಿದ್ದಾರೆ.
ಅವರು ಗುರುವಾರ ಪುತ್ತೂರು ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಇಂಥ ಘಟನೆಗಳು ಇನ್ನು ಮರುಕಳಿಸದಂತೆ ಇಲಾಖೆಯು ಸೂಕ್ತ ಕ್ರಮ ಕೈಗೊಳ್ಳಬೇಕು. ಪೊಲೀಸರ ಮೇಲೆ ಒತ್ತಡ ಹೇರಿ ಈ ಕೃತ್ಯ ನಡೆಸುವಂತೆ ಮಾಡಲಾಗಿದೆ. ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡಿದ್ದಾರೆ ಎಂದು ಭಾವಿಸಿ ತಮ್ಮ ಪಕ್ಷದ ಕಾರ್ಯಕರ್ತರ ಮೇಲೆಯೇ ಹಲ್ಲೆ ಮಾಡಿಸಿದ್ದಾರೆ. ಆದರೆ ಹಲ್ಲೆ ಕೃತ್ಯಕ್ಕೆ ಇಲಾಖೆಯೇ ನೇರ ಹೊಣೆಯಾಗಿದೆ. ಚುನಾವಣೆ ನಡೆದು ಮತ ಎಣಿಕೆಯ ಬಳಿಕ ಹಲವಾರು ಘಟನೆಗಳು ನಡೆಯುತ್ತಿವೆ. ವಿಟ್ಲದಲ್ಲಿ ಅತ್ಯಾಚಾರ ಯತ್ನ, ಗ್ಯಾಸ್ ವಿತರಕರ ಮೇಲೆ ಹಲ್ಲೆ, ಕೂರ್ನಡ್ಕದಲ್ಲಿ ಹಲ್ಲೆ, ಕಾವುವಿನಲ್ಲಿ ಕೇಸರಿ ಫ್ಲಕ್ಸ್ ಹರಿದು ಹಾಕಿರುವುದು, ಸವಣೂರಿನಲ್ಲಿ ಕೇಸರಿ ಧ್ವಜಕ್ಕೆ ಅವಮಾನ ಮಾಡಲಾಗಿದೆ. ಇದೀಗ ಬಿಜೆಪಿ ಮತ್ತು ಹಿಂದುತ್ವ ಕಾರ್ಯಕರ್ತರಿಗೆ ಪೊಲೀಸರ ಮೂಲಕ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ ಎಂದ ಅವರು ಇದರಿಂದಾಗಿ ಪೊಲೀಸರ ಮತ್ತು ಸಾರ್ವಜನಿಕರ ನಡುವೆ ಕಂದಕ ಸೃಷ್ಠಿಯಾಗಿದೆ. ಪುತ್ತೂರಿಗೆ ಜನಸ್ನೇಹಿ ಅಧಿಕಾರಿಗಳು ಬೇಕು. ಹಲ್ಲೆ ನಡೆಸಿದ ಪೊಲೀಸರನ್ನು ತಕ್ಷಣವೆ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪುತ್ತಿಲ ಅವರ ಬೆಂಬಲಿಗರಾದ ಪ್ರಸನ್ನ ಕುಮಾರ್ ಮಾರ್ತ, ಪ್ರವೀಣ್ ಭಂಡಾರಿ, ಅನಂತಕೃಷ್ಣ, ನವೀನ್ ಪಂಜಳ ಮತ್ತು ರಾಜಶೇಖರ್ ಉಪಸ್ಥಿತರಿದ್ದರು.