ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡಗೆ ಸಚಿವ ಸ್ಥಾನ ನೀಡಲು ಒತ್ತಾಯ

ಬೆಂಗಳೂರು, ಮೇ 18: ಮಲೆನಾಡಿನ ಹಿರಿಯ ಮುಖಂಡರು, ಶೃಂಗೇರಿ ಕ್ಷೇತ್ರದ ಶಾಸಕ ರಾಜೇಗೌಡರಿಗೆ ಸಚಿವ ಸ್ಥಾನ ನೀಡಬೇಕು’ ಎಂದು ಮಲೆನಾಡು ಕರಾವಳಿ ಜನಪರ ಒಕ್ಕೂಟದ ಮುಖಂಡ ಅನಿಲ್ ಹೊಸಕೊಪ್ಪ ಒತ್ತಾಯಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತಮಾಡಿದ ಅವರು, ಬಿಜೆಪಿ ಭದ್ರಕೋಟೆ ಶೃಂಗೇರಿಯಲ್ಲಿ ಸತತವಾಗಿ ಎರಡು ಬಾರಿ ಗೆಲುವು ಸಾಧಿಸಿರುವ ಶಾಸಕ ಟಿ.ಡಿ.ರಾಜೇಗೌಡರಿಗೆ ಸಚಿವ ಸ್ಥಾನ ನೀಡಬೇಕು. ಮಲೆನಾಡು ಭಾಗದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೇರುಮಟ್ಟದಿಂದ ಬಲಗೊಳಿಸುವಲ್ಲಿ ರಾಜೇಗೌಡರ ಶ್ರಮ ಹೆಚ್ಚಾಗಿದೆ. ಉಡುಪಿ, ಚಿಕ್ಕಮಗಳೂರು ಭಾಗಗಳಲ್ಲಿ ಕಾಂಗ್ರೆಸ್ ನೆಲ ಕಚ್ಚಿದ ಸಂದರ್ಭದಲ್ಲಿ ಶೃಂಗೇರಿಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಇದಕ್ಕೆ ರಾಜೇಗೌಡರ ಪ್ರಭಾವ ಮತ್ತು ಕಾರ್ಯಕ್ಷಮತೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
‘ಈ ಬಾರಿಯೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿಜೆಪಿ ಧೂಳಿಪಟವಾಗಿದೆ. ಜಿಲ್ಲೆಯ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಯಗಳಿಸಿದೆ. ಬಿಜೆಪಿ ಅಲೆಯ ನಡುವೆ ಕಾಂಗ್ರೆಸ್‍ನ ಮತಬ್ಯಾಂಕ್ ಅನ್ನು ಗಟ್ಟಿಗೊಳಿಸಿಕೊಂಡು ಬಂದಂತಹ ರಾಜೇಗೌಡರಿಗೆ ಈ ಬಾರಿ ಸಚಿವ ಸ್ಥಾನ ನೀಡಬೇಕೆಂಬುದು ಮಲೆನಾಡಿಗರು ಮತ್ತು ಕರಾವಳಿ ಭಾಗದವರ ಒಕ್ಕೊರಲ ಒತ್ತಾಯ ಎಂದು ಅವರು ಹೇಳಿದ್ದಾರೆ.





