ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಗೆಲುವಿನಿಂದ ಕಾರ್ಯಕರ್ತರ ಹುಮ್ಮಸ್ಸು ಇಮ್ಮಡಿ: ಕುಯಿಲಾಡಿ

ಉಡುಪಿ : ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಐದು ಕ್ಷೇತ್ರಗಳ ಭರ್ಜರಿ ಗೆಲುವು ಪಕ್ಷದ ಕಾರ್ಯಕರ್ತರ ಹುಮ್ಮಸ್ಸು ಇಮ್ಮಡಿಗೊಳಿಸಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ನಡೆದ ಬಿಜೆಪಿ ಉಡುಪಿ ಜಿಲ್ಲಾ ಕಾರ್ಯ ತಂಡ ಮತ್ತು ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿಯ ಜಂಟಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಬಿಜೆಪಿಯನ್ನು ಬೆಂಬಲಿಸಿ ಮಗದೊಮ್ಮೆ ಉಡುಪಿ ಜಿಲ್ಲೆಯ ಐದೂ ಸ್ಥಾನಗಳನ್ನು ಗೆಲ್ಲಿಸುವ ಮೂಲಕ ಜಿಲ್ಲೆಯ ಜನತೆ ಅಭಿವೃದ್ಧಿ ಮತ್ತು ಹಿಂದುತ್ವದ ಪರ ವಿಶ್ವಾಸದ ಮುದ್ರೆ ಒತ್ತಿದ್ದಾರೆ. ಈ ಗೆಲುವು ಪಕ್ಷದ ಕಾರ್ಯಕರ್ತರ ಗೆಲುವು. ಈ ವಿಜಯ ಯಾತ್ರೆ ಮುಂಬರಲಿರುವ ಲೋಕಸಭೆ, ಜಿಪಂ, ತಾಪಂ ಸಹಿತ ಎಲ್ಲಾ ಸ್ತರದ ಚುನಾವಣೆ ಗಳಲ್ಲಿಯೂ ಮುಂದುವರಿದು ಮೇಳೈಸಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಉಡುಪಿಯ ನೂತನ ಶಾಸಕ ಯಶ್ಪಾಲ್ ಎ.ಸುವರ್ಣ ಹಾಗೂ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಬಿಜೆಪಿ ರಾಜ್ಯ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಮೊದಲಾದವರು ಉಪಸ್ಥಿತರಿದ್ದರು.







