ಅರುಣ್ ಕುಮಾರ್ ಪುತ್ತಿಲ ಠಾಣೆಗೆ ಬರದಿದ್ದಲ್ಲಿ ಲಾಕಪ್ ಡೆತ್ ನಡೆಯುತ್ತಿತ್ತು: ಅವಿನಾಶ್ ಆರೋಪ
ಬಿಜೆಪಿ ನಾಯಕರ ಭಾವಚಿತ್ರಕ್ಕೆ ಚಪ್ಪಲಿ ಹಾರ ಪ್ರಕರಣ

ಪುತ್ತೂರು: ನಮ್ಮನ್ನು ಠಾಣೆಯಲ್ಲಿ ಕೂಡಿ ಹಾಕಿ ಸಿಕ್ಕಾಪಟ್ಟೆ ಹೊಡೆದರು. ಎಲ್ಲಿಯಾದರೂ ಠಾಣೆಗೆ ಅರುಣಣ್ಣ ರಾತ್ರಿ ಬರದೇ ಇರುತ್ತಿದ್ದಲ್ಲಿ ಬೆಳಗ್ಗಿನ ತನಕ ನಮಗೆ ಹೊಡೆದು ಲಾಕಪ್ ಡೆತ್ ಆಗುತ್ತಿತ್ತು ಎಂದು ಪೊಲೀಸರಿಂದ ದೌರ್ಜನ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಅಭಿ ಯಾನೆ ಅವಿನಾಶ್ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ.
ನಾವು ಗೆಳೆಯರು ಯಾವಾಗಲೂ ಮನೆಯ ಪಕ್ಕದ ಕಟ್ಟೆಯಲ್ಲಿ ಕುಳಿತುಕೊಳ್ಳುತ್ತಿದ್ದು, ಮೇ 15ರಂದು ಅಲ್ಲಿಯೇ ಕುಳಿತುಕೊಂಡಿದ್ದೆವು. ಈ ವೇಳೆ ಆಗಮಿಸಿದ ಪೊಲೀಸರು ನಿಮ್ಮ ಜೊತೆ ಮಾತನಾಡಲು ಇದೆ ಎಂದು ಹೇಳಿ ಠಾಣೆಗೆ ಕೊಂಡುಹೋದರು. ಮಂಜಲ್ಪಡ್ಪು ಸಮೀಪ ಇರುವ ಡಿವೈಎಸ್‍ಪಿ ಕಚೇರಿಗೆ ಹೋಗಿದ್ದ ಬಳಿಕ ಅಲ್ಲಿ ಪೊಲೀಸರು ಇದರಲ್ಲಿ ಅವಿನಾಶ್ ಯಾರು ಎಂದು ಕೇಳಿದರು. ನಾನೇ ಅವಿನಾಶ್ ಎಂದಾಗ ಬಾರೀ ಹಾರಾಡ್ತಿಯ ಎಂದು ಹೇಳಿ ನನ್ನ ಮೇಲೆ ಹೊಡೆಯಲು ಆರಂಭಿಸಿದರು. ಬಳಿಕ ಡಿವೈಎಸ್‍ಪಿ ಅವರ ಚೇಂಬರ್ ಕರೆದೊಯ್ದು ಅಲ್ಲಿ ನನ್ನ ಬಟ್ಟೆಗಳನ್ನು ಬಿಚ್ಚಿ ತೊಡೆಗೆ, ಪಾದಕ್ಕೆ ಮತ್ತು ಕೆನ್ನೆಗೆ ಹೊಡೆದರು. ಗನ್ ತೋರಿಸಿ ಹೆದರಿಸಿದರು ಎಂದು ಮಾದ್ಯಮಕ್ಕೆ ತಿಳಿಸಿದರು.





