ಲೋಕಭಾ ಚುನಾವಣೆಗೆ ದೇವೇಗೌಡರು ಹಾಸನದಿಂದ ಸ್ಪರ್ಧಿಸುವುದಾರೆ ಪ್ರಜ್ವಲ್ ನಿಲ್ಲಲ್ಲ: ಭವಾನಿ ರೇವಣ್ಣ
''ಸ್ವರೂಪ್ ಗೆಲುವು ದೇವೇಗೌಡರ ಜನ್ಮದಿನಕ್ಕೆ ಉಡುಗೊರೆ''

ಹಾಸನ: ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರದ ವೇಳೆ ಹೇಳಿದಂತೆ ಕ್ಷೇತ್ರದ ಅಭ್ಯರ್ಥಿ ಸ್ವರೂಪ್ ಗೆಲುವನ್ನು ಹೆಚ್.ಡಿ. ದೇವೇಗೌಡರ ಜನ್ಮದಿನಕ್ಕೆ ಉಡುಗೊರೆಯಾಗಿ ನೀಡಿದ್ದು, ಮುಂದೆ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಹಾಸನ ಜಿಲ್ಲೆಯಿಂದ ದೇವೇಗೌಡರು ಸ್ಪರ್ಧೆ ಮಾಡಲು ಬಯಸಿದರೆ ನನ್ನ ಮಗ ಪ್ರಜ್ವಲ್ ನನ್ನು ನಿಲ್ಲಿಸುವುದಿಲ್ಲ ಎಂದು ಜಿಲ್ಲಾ ಪಂಚಾಯತ್ ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಭವಾನಿ ರೇವಣ್ಣ ತಿಳಿಸಿದ್ದಾರೆ.
ನಗರದ ಸಂಸದರ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, 'ದೇವೇಗೌಡರ ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಬಹಳ ಸಂತೋಷ. ಹಾಸನದಲ್ಲಿ ನಿಂತತೆ ಇನ್ನೂ ಸಂತೋಷ. ಅವರು ನಿಲ್ಲುತ್ತಾರೆ ಎಂದರೆ ಪ್ರಜ್ವಲ್ ನನ್ನು ನಿಲ್ಲಿಸಲ್ಲ, ಮೊದಲ ಆದ್ಯತೆ ದೇವೇಗೌಡರಿಗೆ' ಎಂದು ತಿಳಿಸಿದರು.
2023ರ ರಾಜ್ಯ ವಿಧಾನಸಭಾ ಚುನಾವಣೆ ನಡೆದಿದ್ದು, ಈ ಬಾರಿ ಜೆಡಿಎಸ್ ಸರಕಾರ ಅಧಿಕಾರಕ್ಕೆ ಬರುತ್ತದೆ ಎಂದು ನಿರೀಕ್ಷೆ ಮಾಡಿದ್ದೆವು. ಆದರೆ ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸ್ವರೂಪ್ ಅವರನ್ನು ಗೆಲ್ಲಿಸಲೇ ಬೇಕೆಂದು ನಮ್ಮ ಇಡೀ ಕುಟುಂಬ ಒಟ್ಟಾಗಿ ನಾವು ಅಂದಿಕೊಂಡಿದ್ದೆವು. ಜೊತೆಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಸನದ ಜನತೆ ಕೂಡ ಗೆಲುವಿಗಾಗಿ ಹೋರಾಟ ಮಾಡಿದ್ದಾರೆ. ಜೆಡಿಎಸ್ ಪಕ್ಷದಿಂದ ಯಾರನ್ನೇ ಅಭ್ಯರ್ಥಿಯಾಗಿ ಕೊಟ್ಟರೂ ಗೆಲ್ಲಿಸಬೇಕು ಎನ್ನುವುದು ಜನರ ಮನಸ್ಸಿನಲ್ಲಿತ್ತು. ಈ ವೇಳೆ ಸ್ವರೂಪನ್ನು ಅಭ್ಯರ್ಥಿಯಾಗಿ ಕೊಟ್ಟ ಮೇಲೆ ಎಲ್ಲರೂ ಒಗ್ಗಟ್ಟಾಗಿ ಗೆಲುವು ತಂದುಕೊಟ್ಟಿದ್ದಾರೆ ಎಂದರು.
ಇದೆ ವೇಳೆ ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸ್ವಾಮಿಗೌಡ, ಒಕ್ಕಲಿಗರ ಸಂಘದ ನಿರ್ದೇಶಕ ಸುಮುಖ ರಘು, ಡಿಸಿಸಿ ಬ್ಯಾಂಕ್ ಬಿದರಿಕೆರೆ ಜಯರಾಮ್ ಇತರರು ಉಪಸ್ಥಿತರಿದ್ದರು.







