ಮೇ 21ರಂದು ಮರ್ಕಝ್ ಮದನೀಯಂ ಸಾದಾತ್ ವಸತಿ ಯೋಜನೆಯ 111 ಮನೆಗಳ ಹಸ್ತಾಂತರ

ಮಂಗಳೂರು, ಮೇ 18: ವಿಶ್ವ ವಿಖ್ಯಾತ ವಿದ್ಯಾಸಂಸ್ಥೆ ಸುನ್ನೀ ಮರ್ಕಝ್ ಹಾಗೂ ಮದನೀಯಂ ಚಾನೆಲ್ ಬಳಗವು ಜಂಟಿಯಾಗಿ ಬಡ ಸಯ್ಯದ್ ಕುಟುಂಬಗಳಿಗೆ ನಿರ್ಮಿಸಿಕೊಡುತ್ತಿರುವ ವಸತಿ ಯೋಜನೆಯ ಮೊದಲ ಹಂತದ ಮನೆಗಳ ಹಸ್ತಾಂತರ ಕಾರ್ಯಕ್ರಮವು ಮೇ 21ರಂದು ಕಲ್ಲ್‌ಕೋಟೆಯ ಮರ್ಕಝ್‌ನಲ್ಲಿ ನಡೆಯಲಿದೆ ಎಂದು ಮದನೀಯಂ ಬಳಗದ ನಿರ್ದೇಶಕ ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ತಿಳಿಸಿದ್ದಾರೆ.
ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಧಾರ್ಮಿಕ ಸಾಮಾಜಿಕ ರಾಜಕೀಯ ಕ್ಷೇತ್ರದ ಪ್ರಮುಖ ನಾಯಕರ ನೇತೃತ್ವದಲ್ಲಿ 111 ಮನೆಗಳ ಕೀಲಿ ಕೈಗಳನ್ನು ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದರು.
ಭಾರತದ ಗ್ರಾಂಡ್ ಮುಫ್ತ್ತಿ ಸುಲ್ತಾನುಲ್ ಉಲಮಾ ಎ.ಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂರವರ ನಿರ್ದೇಶನದಂತೆ ಮದನೀಯಂ ಚಾನೆಲ್ ತನ್ನ ಮೊದಲ ವರ್ಷಾಚರಣೆಯ ಅಂಗವಾಗಿ 100 ಬಡ ಸಯ್ಯದ್ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಲು ಯೋಜನೆ ಹಾಕಿತ್ತು. ಆದರೆ 406 ಅರ್ಜಿಗಳು ಬಂದಿದ್ದು, ಈ ಪೈಕಿ ಅರ್ಹರಾದ 313 ಕುಟುಂಬಗಳನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ 111 ಮನೆಗಳ ನಿರ್ಮಾಣ ಪೂರ್ಣಗೊಂಡಿದ್ದು ಉಳಿದ ಮನೆಗಳನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು. ಪ್ರತಿ ಮನೆಯು 650 ಚದರ ಅಡಿ ವಿಸ್ತ್ರೀರ್ಣ ಹೊಂದಿದ್ದು ,ತಲಾ 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ದ.ಕ.ಜಿಲ್ಲೆಯಲ್ಲಿ 7 ಮಂದಿಗೆ ಮನೆಗಳನ್ನು ಹಸ್ತಾಂತರಿಸಲಾಗುವುದು ಎಂದು ಹೇಳಿದರು.
ಮದನೀಯಂ ಚಾನೆಲ್ ಬಳಗವು ಮನೆ ನಿರ್ಮಾಣಕ್ಕೆ ಹಣ ಸಂಗ್ರಹಿಸಿದ್ದು,ಮರ್ಕಝ್ ಸಂಸ್ಥೆಯ ಯೋಜನೆಯನ್ನು ಸರ್ಮಪಕವಾಗಿ ನಿರ್ವಹಿಸುತ್ತಿದೆ. ಮೊದಲ ಹಂತದ ಮನೆಗಳ ವಿತರಣೆಯಿಂದ ಕರ್ನಾಟಕ, ಕೇರಳ, ತಮಿಳು ನಾಡು ರಾಜ್ಯಕ್ಕೆ ಸೇರಿದ ನೂರಾರು ಸಯ್ಯದ್ ಕುಟುಂಬಗಳಿಗೆ ಸ್ವಂತ ಮನೆಯ ಕನಸು ಈಡೇರಿದಂತಾಗಲಿದೆ.
ಕೋವಿಡ್ ವ್ಯಾಪಕವಾಗಿದ್ದ ಕಾಲದಲ್ಲಿ ಜನರಿಗೆ ಮನೆಯೊಳಗೆ ಉಳಿಯಬೇಕಾಗಿ ಬಂದಾಗ ಅವರಲ್ಲಿ ಉತ್ಸಾಹ ತುಂಬುವ ಸಲುವಾಗಿ ಆನ್‌ಲೈನ್ ಮೂಲಕ ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ನೀಡುವುದಕ್ಕಾಗಿ ಮದನಿಯಂ ಬಳಗವನ್ನು ರೂಪಿಸಲಾಗಿತ್ತು. ಒಂದು ಲಕ್ಷಕ್ಕೂ ಅಧಿಕ ಖಾಯಂ ಸದಸ್ಯರನ್ನು ಹೊಂದಿರುವ ಮದನೀಯಂ ಬಳಗವು ವಸತಿ ಯೋಜನೆ ಅಲ್ಲದೆ ಇನ್ನು ಹಲವು ಜೀವಕಾರಣ್ಯ ಯೋಜನೆಗಳನ್ನು ಕೈಗೊಂಡಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಎಸ್‌ವೈಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಎಂ.ಅಬೂಬಕರ್ ಸಿದ್ದೀಖ್ ಮೋಂಟು ಗೋಳಿ, ಎಸ್‌ಎಸ್‌ಎಫ್ ರಾಜ್ಯ ಕಾರ್ಯದರ್ಶಿ ಇಸ್ಮಾಯೀಲ್ ಮಾಸ್ಟರ್ ಮರಿಕ್ಕಳ, ಪಂಪ್‌ವೆಲ್ ತಖ್ವಾ ಮಸೀದಿಯ ಇಮಾಮ್ ಹಾಫಿಳ್ ಅಬ್ದುರ‌್ರಹ್ಮಾನ್ ಸಖಾಫಿ ಉಪಸ್ಥಿತರಿದ್ದರು.







