ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಗ್ರೀನ್ ಏರ್‌ಪೋರ್ಟ್’ ಮನ್ನಣೆ

ಮಂಗಳೂರು, ಮೇ 18: ಹಸಿರು ಪ್ರಗತಿ ಮತ್ತು ಸುಸ್ಥಿರತೆಯ ನೀತಿಗೆ ಅನುಗುಣವಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ‘ಗ್ರೀನ್ ಏರ್ಪೋರ್ಟ್ ರೆಕಗ್ನಿಷನ್ (ಜಿಎಆರ್) 2023ರಲ್ಲಿ ಗುರುತಿಸಲ್ಪಟ್ಟಿದೆ.
ವಾರ್ಷಿಕ 8 ದಶಲಕ್ಷಕ್ಕಿಂತ ಕಡಿಮೆ ಪ್ರಯಾಣಿಕರಿರುವ ವಿಭಾಗದಲ್ಲಿ ಪ್ರತಿಷ್ಠಿತ ಪ್ಲಾಟಿನಂ ರೇಟಿಂಗ್‌ನ್ನು ಮಂಗಳೂರು ವಿಮಾನ ನಿಲ್ದಾಣ ಪಡೆದುಕೊಂಡಿದೆ ಎಂದು ಪ್ರಕಟನೆ ತಿಳಿಸಿವೆ.
ಏಪೋರ್ಟ್ ಕೌನ್ಸಿಲ್ ಇಂಟರ್ ನ್ಯಾಷನಲ್ (ಎಸಿಐ) ಏಷ್ಯಾ-ಪೆಸಿಫಿಕ್ ನೀಡುವ ಈ ರೇಟಿಂಗ್ ‘ಎಂಐಎ’ನ ಅಚಲ ಸಮರ್ಪಣೆ ಮತ್ತು ಸುಸ್ಥಿರ ಉಪಕ್ರಮಗಳಲ್ಲಿನ ಸಾಧನೆಗಳಿಗೆ ಸಾಕ್ಷಿಯಾಗಿದೆ. ಸಿಂಗಲ್ ಯೂಸ್ ಪ್ಲಾಸ್ಟಿಕ್ (ಎಸ್‌ಯ್ಯುಪಿ) ಬಳಕೆಯನ್ನು ತೊಡೆದು ಹಾಕಿದ ವಿಮಾನ ನಿಲ್ದಾಣಗಳಲ್ಲಿ ಮಂಗಳೂರು ವಿಮಾನ ನಿಲ್ದಾಣವೂ ಒಂದಾಗಿದೆ. ತನ್ನ ಹಸಿರು ಉಪಕ್ರಮಗಳೊಂದಿಗೆ ಅತ್ಯುನ್ನತ ಗುಣಮಟ್ಟವನ್ನು ಮಂಗಳೂರು ವಿಮಾನ ನಿಲ್ದಾಣವು ಕಾಯ್ದುಕೊಂಡಿದೆ.
ಕೋಬೆಯಲ್ಲಿ ನಡೆದ 18ನೇ ಎಸಿಐ ಏಷ್ಯಾ-ಪೆಸಿಫಿಕ್ ಪ್ರಾದೇಶಿಕ ಸಮ್ಮೇಳನ ಮತ್ತು ಪ್ರದರ್ಶನದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು ಎಂದು ತಿಳಿಸಲಾಗಿದೆ.