ಮೇ 22ರವರೆಗೆ ವಾಂಖೆಡೆಯನ್ನು ಬಂಧಿಸದಂತೆ ದಿಲ್ಲಿ ಹೈಕೋರ್ಟ್ ಆದೇಶ

ಹೊಸದಿಲ್ಲಿ: ಡ್ರಗ್ಸ್ ಪ್ರಕರಣದಲ್ಲಿ ಶಾರೂಕ್ ಖಾನ್ ಪುತ್ರ ಆರ್ಯನ್ ರನ್ನು ಸಿಲುಕಿಸದೆ ಇರಲು 25 ಕೋಟಿ ರೂ. ಲಂಚದ ಬೇಡಿಕೆಯೊಡ್ಡಿದ ಆರೋಪ ಎದುರಿಸುತ್ತಿರುವ ಮಾದಕದ್ರವ್ಯ ನಿಯಂತ್ರಣ ಇಲಾಖೆಯ ಮಾಜಿ ಅಧಿಕಾರಿ ಸಮೀರ್ ವಾಂಖೆಡೆಯವರನ್ನು ಮೇ 22ರವರೆಗೆ ಬಂಧಿಸದಂತೆ ದಿಲ್ಲಿ ಹೈಕೋರ್ಟ್ ಆದೇಶ ನೀಡಿದೆ.
ತನ್ನ ವಿರುದ್ಧ ಎನ್ಸಿಬಿ ಹೊರಿಸಿರುವ ಆರೋಪಗಳು ಸುಳ್ಳು ಹಾಗೂ ತಪ್ಪುದಾರಿಗೆಳೆಯುವಂತಹವು ಎಂದು ಆರೋಪಿಸಿ ವಾಂಖೆಡೆ, ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಬಾಂಬೆ ಹೈಕೋರ್ಟ್ ನ ಮುಂದೆಯೇ ಈ ಅರ್ಜಿಯನ್ನು ವಿಚಾರಣೆಗೆ ತರಬೇಕೆಂದು ದಿಲ್ಲಿ ಸರಕಾರದ ವಕೀಲರು ಆಗ್ರಹಿಸಿದ್ದಾರೆ. ನ್ಯಾಯಮೂರ್ತಿ ವಿಕಾಸ್ ಮಹಾಜನ್ ಅವರನ್ನೊಳಗೊಂಡ ನ್ಯಾಯಪೀಠವು ಗುರುವಾರದಿಂದ ಐದು ದಿನಗಳವರೆಗೆ ವಾಂಖೆಡೆಗೆ ಬಂಧನದ ವಿರುದ್ಧ ರಕ್ಷಣೆಯನ್ನು ನೀಡಿದೆ.
ಈ ಮಧ್ಯೆ ಇದೇ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಮೇ 18ರಂದು ತನ್ನ ಮುಂದೆ ಹಾಜರಾಗುವಂತೆ ವಾಂಖೆಡೆಯವರಿಗೆ ಸಮನ್ಸ್ ನೀಡಿದೆ. ಅವರು ಮುಂಬೈನಲ್ಲಿ ಸಿಬಿಐ ತಂಡದ ಮುಂದೆ ಹಾಜರಾಗುವ ಸಾಧ್ಯತೆಯಿದೆ.
ಆರ್ಯನ್ ಖಾನ್ ಅವರನ್ನು ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಸದೆ ಇರಲು 25 ಕೋಟಿ ರೂ. ಲಂಚ ನೀಡುವಂತೆ ವಾಂಖೆಡೆ ಅವರು ಶಾರುಖ್ ಖಾನ್ ಕುಟುಂಬಕ್ಕೆ ಬೇಡಿಕೆಯೊಡ್ಡಿದ್ದರೆಂದು ಆರೋಪಿಸಿ ಸಿಬಿಐ ಪ್ರಕರಣ ದಾಖಲಿಸಿತ್ತು.
ವಾಂಖೆಡೆ ನೇತೃತ್ವದ ಎನ್ಸಿಬಿ ತಂಡವು ಮುಂಬೈನ ಸಮುದ್ರ ಪ್ರದೇಶದಲ್ಲಿ ಪ್ರಯಾಣಿಸುತ್ತಿದ್ದ ವಿಹಾರ ನೌಕೆಯಲ್ಲಿ ಮಾದಕ ವಸ್ತುಗಳನ್ನು ಹೊಂದಿದ್ದ ವ್ಯಕ್ತಿಗಳು ಹಾಗೂ ಅವುಗಳ ಪೂರೈಕೆದಾರನು ಪರಾರಿಯಾಗುವುದಕ್ಕೆ ಅವಕಾಶ ನೀಡಿದ್ದರೆಂದು ಸಿಬಿಐ ಆಪಾದಿಸಿದೆ.







