ದ.ಏಶ್ಯ: 2022ರಲ್ಲಿ ಪ್ರವಾಹ, ಚಂಡಮಾರುತದಿಂದಾಗಿ 20.50 ಲಕ್ಷ ಮಂದಿ ಸ್ಥಳಾಂತರ

ಹೊಸದಿಲ್ಲಿ, ಮೇ 18: ಭಾರೀ ನೆರೆ ಹಾಗೂ ಚಂಡಮಾರುತ ಸೇರಿದಂತೆ ಪ್ರಾಕೃತಿಕ ವಿಕೋಪಗಳ ಪರಿಣಾಮವಾಗಿ 2022ರಲ್ಲಿ ಭಾರತದಲ್ಲಿ 20.50 ಲಕ್ಷ ಮಂದಿ ಸ್ಥಳಾಂತರಗೊಂಡಿದ್ದಾರೆಂದು ಜಿನೇವಾದ ಆಂತರಿಕ ಸ್ಥಳಾಂತರ ನಿಗಾ ಕೇಂದ್ರದ ವರದಿಯೊಂದು ತಿಳಿಸಿದೆ.
ದಕ್ಷಿಣ ಏಶ್ಯದಲ್ಲಿ 2022ರಲ್ಲಿ ಪ್ರಾಕೃತಿಕ ವಿಕೋಪಗಳಿಂದಾಗಿ 1.25 ಕೋಟಿ ಮಂದಿ ಸ್ಥಳಾಂತರಗೊಂಡಿದ್ದು, ಅವುಗಳಲ್ಲಿ ಶೇ.90ರಷ್ಟು ಪ್ರವಾಹಪರಿಸ್ಥಿತಿಯಿಂದಾಗಿ ಸಂಭವಿಸಿದೆ ಎಂದು ಅದು ಹೇಳಿದೆ.
ದಕ್ಷಿಣ ಏಶ್ಯದ ಬಹುತೇಕ ಎಲ್ಲಾ ದೇಶಗಳಲ್ಲಿಯೂ ನೆರೆಯಿಂದಾಗಿ ಸ್ಥಳಾಂತರವಾಗಿದ್ದು ಪಾಕಿಸ್ತಾನ, ಭಾರತ ಹಾಗೂ ಬಾಂಗ್ಲಾ ಅತ್ಯಧಿಕವಾಗಿ ಬಾಧಿತವಾಗಿವೆ ಎಂದು ವರದಿ ಹೇಳಿದೆ. ಕಳೆದ ವರ್ಷ ಭಾರತ ಹಾಗೂ ಬಾಂಗ್ಲಾ ದೇಶಗಳು ಮುಂಗಾರು ಋತುವಿನ ಅಧಿಕೃತ ಆರಂಭಕ್ಕೂ ಮೊದಲೇ ಪ್ರವಾಹವನ್ನು ಕಂಡಿದ್ದವು. ಮೇ ತಿಂಗಳ ಆರಂಭದಲ್ಲಿ ಅಸ್ಸಾಂ ಭಾರೀ ನೆರೆಯಿಂದ ಪೀಡಿತವಾಗಿತ್ತು, ಜೂನ್ ತಿಂಗಳಲ್ಲಿಯೂ ಆ ರಾಜ್ಯದ ಕೆಲವು ಪ್ರದೇಶಗಳು ನೆರೆನೀರಿನಲ್ಲಿ ಮುಳುಗಡೆಗೊಂಡಿದ್ದವು. ಅಸ್ಸಾಂನಾದ್ಯಂತ ಕಳೆದ ವರ್ಷ ಸುಮಾರು ಐವತ್ತು ಲಕ್ಷ ಜನರು ಪ್ರವಾಹಕ್ಕೆ ತುತ್ತಾಗಿದ್ದರು.
ಕಳೆದ ವರ್ಷ ಭಾರತದಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ನೆರೆಯ ರಾಷ್ಟ್ರವಾದ ಬಾಂಗ್ಲಾದೇಶದಲ್ಲಿನ ನದಿಗಳು ಪ್ರವಾಹ ಪೀಡಿತವಾಗಿದ್ದರಿಂದ 5500ಕ್ಕೂ ಅಧಿಕ ಮಂದಿಯ ಸ್ಥಳಾಂತರಗೊಳ್ಳಬೇಕಾಯಿತು ಎಂದು ವರದಿ ತಿಳಿಸಿದೆ.
2022ರಲ್ಲಿ ದಕ್ಷಿಣ ಏಶ್ಯದಲ್ಲಿ ಚಂಡಮಾರುತ ಹಾವಳಿಯು 10.10 ಲಕ್ಷ ಮಂದಿ ಸ್ಥಳಾಂತರಗೊಳ್ಳುವಂತೆ ಮಾಡಿದೆ. ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಸಿತಾರಂಗ್ ಚಂಡಮಾರುತವು 66 ಸಾವಿರ ಮಂದಿಯ ಸ್ಥಳಾಂತರಕ್ಕೆ ಕಾರಣವಾಗಿದೆ.
ಆಂಧ್ರಪ್ರದೇಶದಲ್ಲಿ ‘ಅಸಾನಿ’ ಚಂಡಮಾರುತವು 1500 ಮಂದಿ ಹಾಗೂ ತಮಿಳುನಾಡಿನಲ್ಲಿ ‘ಮಾಂಡೌಸ್’ ಚಂಡಮಾರುತವು 9500 ಮಂದಿ ಸ್ಥಳಾಂತರಗೊಳ್ಳುವಂತೆ ಮಾಡಿದೆ ಎಂದು ವರದಿ ತಿಳಿಸಿದೆ.







