ಧ್ವಜ ಮೆರವಣಿಗೆಯ ಪಥ ಬದಲಿಸಲು ಇಸ್ರೇಲ್ ನಕಾರ; ಗಾಝಾದಲ್ಲಿ ಉದ್ವಿಗ್ನ ಸ್ಥಿತಿ

ಜೆರುಸಲೇಂ, ಮೇ 18: ಜೆರುಸಲೇಂನ ಓಲ್ಡ್ ಸಿಟಿಯಿಂದ ವಿವಾದಾತ್ಮಕ ಧ್ವಜ ಮೆರವಣಿಗೆಯ ಪಥವನ್ನು ಬದಲಿಸದ ಇಸ್ರೇಲ್ ಸರಕಾರದ ಕ್ರಮವು ಉದ್ದೇಶಪೂರ್ವಕ ಪ್ರಚೋದನೆಯಾಗಿದೆ ಎಂದು ಫೆಲೆಸ್ತೀನ್ ಆಡಳಿತ ಹೇಳಿದೆ.
ಧ್ವಜ ಮೆರವಣಿಗೆಯಿಂದಾಗಿ ಇಸ್ರೇಲ್, ವೆಸ್ಟ್ಬ್ಯಾಂಕ್ ಮತ್ತು ಗಾಝಾ ಪಟ್ಟಿಯಲ್ಲಿ ಉದ್ವಿಗ್ನತೆ ಹೆಚ್ಚಿದ್ದು ಫೆಲೆಸ್ತೀನ್ ಸಶಸ್ತ್ರ ಹೋರಾಟಗಾರರು ಹಾಗೂ ಇಸ್ರೇಲ್ ನಡುವಿನ ಕದನವಿರಾಮವನ್ನು ಭಗ್ನಗೊಳಿಸಿ ಜೆರುಸಲೇಂನಲ್ಲಿ ಹಿಂಸಾತ್ಮಕ ಘರ್ಷಣೆ ಮರುಕಳಿಸುವ ಭೀತಿ ಎದುರಾಗಿದೆ ಎಂದು ಹೇಳಿಕೆ ತಿಳಿಸಿದೆ.
1967ರಲ್ಲಿ ಇಸ್ರೇಲ್ ಪೂರ್ವ ಜೆರುಸಲೇಂ ಅನ್ನು ವಶಪಡಿಸಿಕೊಂಡು ಕ್ರಮೇಣ ಅದನ್ನು ಸ್ವಾಧೀನಕ್ಕೆ ಪಡೆದುಕೊಂಡ ದಿನದ ವಾರ್ಷಿಕೋತ್ಸವವನ್ನು ಮೇ 18ರಂದು ಇಸ್ರೇಲ್ `ಧ್ವಜ ದಿನ'ವಾಗಿ ಆಚರಿಸುತ್ತಿದೆ. ಈ ಕ್ರಮವನ್ನು ಜೆರುಸಲೇಂನ ಮರುಏಕೀಕರಣ ಎಂದು ಇಸ್ರೇಲ್ ಉಲ್ಲೇಖಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಪೂರ್ವ ಜೆರುಸಲೇಂ ಮತ್ತು ಓಲ್ಡ್ ಸಿಟಿಯಲ್ಲಿ ಬಿಗಿ ಭದ್ರತೆಯನ್ನು ವ್ಯವಸ್ಥೆಗೊಳಿಸಲಾಗಿದ್ದು ಮುಖ್ಯ ರಸ್ತೆಯ ಹಲವೆಡೆ ಮಿಲಿಟರಿ ಚೆಕ್ಪಾಯಿಂಟ್ಗಳನ್ನು ಸ್ಥಾಪಿಸಲಾಗಿದೆ. ಧ್ವಜ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಭದ್ರತೆಗಾಗಿ 3000 ಸಿಬಂದಿಗಳನ್ನು ನಿಯೋಜಿಸಲಾಗಿದೆ.
ವಿವಾದಾತ್ಮಕ ಧ್ವಜ ಮೆರವಣಿಗೆಯ ಪಥವನ್ನು ಬದಲಿಸಲು ಸಾಧ್ಯವಿಲ್ಲ. ಮೆರವಣಿಗೆಯು ಪೂರ್ವ ನಿರ್ಧರಿತವಾದಂತೆ ದಮಾಸ್ಕಸ್ ಗೇಟ್ ಮತ್ತು ಓಲ್ಡ್ ಸಿಟಿಯ ಮೂಲಕವೇ ಸಾಗಲಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ರಾಷ್ಟ್ರೀಯ ಭದ್ರತಾ ಸಚಿವ ಇತಮಾರ್ ಬೆನ್ಗ್ವಿರ್ ನೇತೃತ್ವದಲ್ಲಿ 7 ಸಚಿವರೂ ಮೆರವಣಿಗೆಯಲ್ಲಿ ಪಾಲ್ಗೊಳ್ಳುವರು ಎಂದು ಸರಕಾರದ ಮೂಲಗಳು ಹೇಳಿವೆ.
`ದೇವರ ದಯೆಯಿಂದ ನಾವು ನಮ್ಮ ಶಾಶ್ವತ ರಾಜಧಾನಿಯಲ್ಲಿ ಜೆರುಸಲೇಂ ದಿನ ಆಚರಿಸಲಿದ್ದು ಮೆರವಣಿಗೆಗೆ ಭದ್ರತೆ ಒದಗಿಸಲು ನಮ್ಮ ಸಿಬಂದಿಯನ್ನು ನಿಯೋಜಿಸಿದ್ದೇವೆ. ನಾಳೆ ಜೆರುಸಲೇಂ ಬಿಳಿ ಮತ್ತು ನೀಲಿ ಬಣ್ಣದಿಂದ ಕಂಗೊಳಿಸಲಿದೆ' ಎಂದು ಬೆನ್ಗ್ವಿರ್ ಟ್ವೀಟ್ ಮಾಡಿದ್ದಾರೆ.
ಯೆಹೂದಿ ದೇಗುಲ ಸಂಘಟನೆಗಳು ಹಾಗೂ ವಸಾಹತುಗಾರರ ಗುಂಪುಗಳು ಪ್ರಚೋದನಕಾರಿ ಮೆರವಣಿಗೆಗೆ ಮುಂಚಿತವಾಗಿ ಅಲ್-ಅಕ್ಸಾ ಮಸೀದಿಯ ಆವರಣಕ್ಕೆ ನುಗ್ಗಲು 5 ಸಾವಿರಕ್ಕೂ ಹೆಚ್ಚು ವಸಾಹತುಗಾರರನ್ನು ನಿಯೋಜಿಸಲು ಉದ್ದೇಶಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಜೆರುಸಲೇಂ ಓಲ್ಡ್ ಸಿಟಿಯ ಬದಲು ಬೇರೆ ರಸ್ತೆಯಲ್ಲಿ ಮೆರವಣಿಗೆ ಸಾಗಲು ಒಪ್ಪದಿರುವುದು ಉದ್ದೇಶಪೂರ್ವಕ ಪ್ರಚೋದನೆಯಾಗಿದೆ ಎಂದು ಪೆಲೆಸ್ತೀನಿಯನ್ ಆಡಳಿತ ಹೇಳಿದೆ. ಅಲ್-ಅಕ್ಸಾ ಮಸೀದಿಯ ಆವರಣಕ್ಕೆ ನುಗ್ಗಲು ಕರೆ ನೀಡಿರುವುದು ಈ ಪ್ರಾಂತದಲ್ಲಿ ಹಿಂಸೆಯನ್ನು ಪ್ರಚೋದಿಸಲಿದೆ. ಇದೀಗ ನೆಲೆಸಿರುವ ಉದ್ವಿಗ್ನತೆ ಹಿಂಸಾಚಾರದ ರೂಪದಲ್ಲಿ ಉಲ್ಬಣಿಸಿದರೆ ಅದಕ್ಕೆ ಇಸ್ರೇಲ್ ಸರಕಾರವೇ ಹೊಣೆಯಾಗಲಿದೆ. ಸರಕಾರದ ಕ್ರಮಗಳು ಉಗ್ರಗಾಮಿಗಳ ಬೇಡಿಕೆಗೆ ಅದರ ಒಪ್ಪಿಗೆಯನ್ನು ದೃಢಪಡಿಸುತ್ತದೆ. ಇಸ್ರೇಲ್ ಪ್ರಚೋದನಕಾರಿಯಾಗಿ ವರ್ತಿಸಿದರೆ ಖಂಡಿಸುವುದಾಗಿ ಹೇಳಿದ್ದ ಅಮೆರಿಕದ ಅಧ್ಯಕ್ಷರು ಈಗ ತಮ್ಮ ಮಾತನ್ನು ಕೃತ್ಯದ ಮೂಲಕ ಸಾಬೀತುಪಡಿಸಬೇಕು ಎಂದು ಫೆಲೆಸ್ತೀನ್ ಆಡಳಿತದ ವಕ್ತಾರರು ಹೇಳಿದ್ದಾರೆ.
ಇದೊಂದು ಪ್ರಚೋದನಕಾರಿ ಮೆರವಣಿಗೆಯಾಗಿದ್ದು ಜೆರುಸಲೇಂ ನಗರವನ್ನು ಬದಲಿಸುವ ಮತ್ತು ಅದರ ಮೇಲೆ ಇಸ್ರೇಲ್ನ ಗುರುತನ್ನು ಬಲವಂತವಾಗಿ ಹೇರುವ ಪ್ರಯತ್ನಗಳಿಗೆ ಹಮಾಸ್ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸಲಿದೆ ಎಂದು ಹಮಾಸ್ ನ ವಕ್ತಾರ ಹಝೀಂ ಖಾಸಿಂ ಹೇಳಿದ್ದಾರೆ. ಸುಮಾರು 2 ಲಕ್ಷದಷ್ಟು ಯುವ, ಸಾಂಪ್ರದಾಯಿಕ ಯೆಹೂದಿ ಪುರುಷರು ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಶಾಂತವಾಗಿ ಮತ್ತು ಸಂಯಮದಿಂದ ಇರುವಂತೆ ಹಾಗೂ ಉದ್ವಿಗ್ನತೆ ಹೆಚ್ಚಿಸುವ ಯಾವುದೇ ಕ್ರಮ ಕೈಗೊಳ್ಳದಂತೆ ಶ್ವೇತಭವನವು ಇಸ್ರೇಲ್ ಮತ್ತು ಫೆಲೆಸ್ತೀನ್ ಪ್ರಜೆಗಳನ್ನು ಆಗ್ರಹಿಸಿದೆ.
ಫೆಲೆಸ್ತೀನಿಯನ್ ಧ್ವಜ ಪ್ರದರ್ಶನಕ್ಕೆ ಕರೆ
ಈ ಮಧ್ಯೆ, ಇಸ್ರೇಲ್ ನ ಧ್ವಜ ಮೆರವಣಿಗೆ ಹಾದುಹೋಗುವ ದಾರಿಯುದ್ದಕ್ಕೂ ಸಾಧ್ಯವಿರುವ ಕಡೆಗಳಲ್ಲಿ ಫೆಲೆಸ್ತೀನಿಯನ್ ಧ್ವಜವನ್ನು ಪ್ರದರ್ಶಿಸುವಂತೆ ವೆಸ್ಟ್ಬ್ಯಾಂಕ್, ಗಾಝಾ ಪಟ್ಟಿ, ಜೆರುಸಲೇಂ ಮತ್ತು ಇಸ್ರೇಲ್ ನಲ್ಲಿ ಇರುವ ಫೆಲೆಸ್ತೀನಿಯರಿಗೆ ಕರೆ ನೀಡುವ ಅಭಿಯಾನ ಆರಂಭವಾಗಿದೆ.
ಜೆರುಸಲೇಂ ಓಲ್ಡ್ ಸಿಟಿಯಲ್ಲಿ ಉದ್ವಿಗ್ನ ಪರಿಸ್ಥಿತಿಯಿದ್ದು ಓಲ್ಡ್ ಸಿಟಿ, ದಮಾಸ್ಕಸ್ ಗೇಟ್ ನಲ್ಲಿ ಸುಮಾರು 1,500 ಅಂಗಡಿಗಳನ್ನು ಇಸ್ರೇಲ್ ಪೊಲೀಸರು ಬಲವಂತವಾಗಿ ಮುಚ್ಚಿಸಿದ್ದಾರೆ. ಇಸ್ರೇಲ್ ನ ಎಲ್ಲಾ ತೀವ್ರ ಬಲಪಂಥೀಯರು ಓಲ್ಡ್ಸಿಟಿಯಲ್ಲಿ ಉಪಸ್ಥಿತರಿರುವುದರಿಂದ ಪರಿಸ್ಥಿತಿ ಪ್ರಕ್ಷುಬ್ಧಗೊಂಡಿದೆ ಎಂದು ಫೆಲೆಸ್ತೀನ್ ಕಾರ್ಯಕರ್ತರು ಹೇಳಿದ್ದಾರೆ.







