ಎರಡನೇ ಪತ್ನಿಗೆ ಇಷ್ಟವಿಲ್ಲ ಎಂಬ ಕಾರಣಕ್ಕೆ ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಿದ ಭೂಪ..!
ಚಂಡೀಗಢ: ತನ್ನ ಎರಡನೇ ಪತ್ನಿಗೆ ಇಷ್ಟವಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಆರು ವರ್ಷ ವಯಸ್ಸಿಗಿಂತ ಕೆಳಗಿನ ಇಬ್ಬರು ಪುಟ್ಟ ಮಕ್ಕಳನ್ನು ಬಾವಿಗೆ ತಳ್ಳಿ ಸಾಯಿಸಿದ ಘಟನೆ ಹರ್ಯಾಣದ ಗುರುಗ್ರಾಮದಲ್ಲಿ ನಡೆದಿ.
ಮೂಲತಃ ಪಲ್ವಾಲ್ ನ ಸೆಕ್ಟರ್ 58 ಶ್ಯಾಮ್ ಕಾಲೋನಿ ನಿವಾಸಿ ಭಗತ್ ಸಿಂಗ್ (37) ಪ್ರಕರಣದ ಆರೋಪಿ. ಘಟನೆ ನಡೆದ ಒಂದು ಗಂಟೆಯೊಳಗೆ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೊದಲ ಪತ್ನಿಯಲ್ಲಿ ನಾಲ್ಕು ವರ್ಷದ ಗಂಡು ಹಾಗೂ ಐದು ವರ್ಷದ ಹೆಣ್ಣು ಮಕ್ಕಳು ಇದ್ದರು. ಎರಡು ವರ್ಷ ಹಿಂದೆ ಮೊದಲ ಪತ್ನಿ ಮೃತಪಟ್ಟಿದ್ದರಿಂದ ಸಿಂಗ್ ಇತ್ತೀಚೆಗೆ ಎರಡನೇ ವಿವಾಹವಾಗಿದ್ದ. ಎರಡನೇ ಪತ್ನಿ ಈ ಪುಟ್ಟ ಮಕ್ಕಳನ್ನು ಇಷ್ಟಪಡುತ್ತಿಲ್ಲ ಎಂಬ ಕಾರಣಕ್ಕೆ ಬಾವಿಗೆ ತಳ್ಳಿ ಸಾಯಿಸಿದ್ದಾಗಿ ಪೊಲೀಸರು ವಿವರಿಸಿದ್ದಾರೆ. ಎರಡನೇ ಪತ್ನಿ ಹಾಗೂ ಸಿಂಗ್ ನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಗುರುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಿಂಗ್ ತನ್ನ ಇಬ್ಬರು ಮಕ್ಕಳೊಂದಿಗೆ, ಶಂಗೂನ್ ಗಾರ್ಡನ್ ಬಳಿ ಇದ್ದ 15 ಅಡಿ ಆಳದ ಬಾವಿಗೆ ಜಿಗಿದಿದ್ದಾನೆ. ಇದರಲ್ಲಿ ಸುಮಾರು 5 ಅಡಿ ನೀರು ಇತ್ತು. ಮಕ್ಕಳನ್ನು ಕಾಲಿನಿಂದ ಮೆಟ್ಟಿ ನೀರಿನಲ್ಲಿ ಮುಳುಗಿಸಿ ಸಾಯಿಸಿದ್ದಾಗಿ ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಫರೀದಾಬಾದ್ ಪೊಲೀಸ್ ವಕ್ತಾರ ಸುಬೇ ಸಿಂಗ್ ಹೇಳಿದ್ದಾರೆ.
ಸುತ್ತಮುತ್ತಲಿನ ಜನ ಮಕ್ಕಳ ರಕ್ಷಣೆಗೆ ಧಾವಿಸಿದರು. ಧೀರೇಂದ್ರ ಹಾಗೂ ನಸೀಮ್ ಎಂಬ ಇಬ್ಬರು ಬಾವಿಗೆ ಧುಮುಕಿ ಆರೋಪಿಯನ್ನು ಬದಿಗೆ ತಳ್ಳಿ ಮಕ್ಕಳನ್ನು ಮೇಲಕ್ಕೆತ್ತಿದರು. ಆದರೆ ಆಸ್ಪತ್ರೆಗೆ ಕರೆ ತರುವಷ್ಟರಲ್ಲಿ ಮಕ್ಕಳು ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ.