ಗುಜರಾತ್‌ನ ಮಾಜಿ ಸಚಿವ ವಲ್ಲಭಭಾಯಿ ವಘಾಸಿಯಾ ರಸ್ತೆ ಅಪಘಾತದಲ್ಲಿ ಮೃತ್ಯು

ಅಮ್ರೇಲಿ: ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಸಾವರ್ಕುಂಡ್ಲಾ ಪಟ್ಟಣದ ಬಳಿ ಕಾರು ಬುಲ್ಡೋಝರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಗುಜರಾತ್‌ನ ಮಾಜಿ ಕೃಷಿ ಸಚಿವ ವಲ್ಲಭಭಾಯಿ ವಘಾಸಿಯಾ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಗುರುವಾರ ರಾತ್ರಿ ಅಪಘಾತ ಸಂಭವಿಸಿದೆ ಎಂದು ವಂಡಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
69 ರ ವಯಸ್ಸಿನ ವಘಾಸಿಯಾ ಈ ಹಿಂದೆ ಸಾವರಕುಂಡ್ಲಾ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದರು. ವಿಜಯ್ ರೂಪಾನಿ ಸರಕಾರದ ಮೊದಲ ಅವಧಿಯಲ್ಲಿ ಕೃಷಿ ಹಾಗೂ ನಗರ ವಸತಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ವಘಾಸಿಯಾ ಅವರು ಗ್ರಾಮದಿಂದ ಸಾವರಕುಂಡ್ಲಾಗೆ ಹಿಂತಿರುಗುತ್ತಿದ್ದಾಗ ವಂಡಾ ಗ್ರಾಮದ ಬಳಿ ರಾಜ್ಯ ಹೆದ್ದಾರಿಯಲ್ಲಿ ರಾತ್ರಿ 8.30 ರ ಸುಮಾರಿಗೆ ಅಪಘಾತ ಸಂಭವಿಸಿದೆ. ಅವರೊಂದಿಗೆ ವಾಹನದಲ್ಲಿದ್ದ ಒಬ್ಬ ವ್ಯಕ್ತಿಗೆ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮಾಜಿ ಸಚಿವರು ಚಲಾಯಿಸುತ್ತಿದ್ದ ಕಾರು ಬುಲ್ಡೋಝರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮಾಜಿ ಸಚಿವರು ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.







