ಅತ್ಯಂತ ದೀರ್ಘಾವಧಿಗೆ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದವರು ಯಾರು?
ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿದಿದ್ದ ಸಿಎಂಗಳ ಕುರಿತು ಆಸಕ್ತಿಕರ ಮಾಹಿತಿ ಇಲ್ಲಿದೆ...

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಶನಿವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಕರ್ನಾಟಕದ ಈ ಹಿಂದಿನ ಮುಖ್ಯಮಂತ್ರಿಗಳಲ್ಲಿ ಅತ್ಯಂತ ದೀರ್ಘ ಅವಧಿಗೆ ಆಡಳಿತ ನಡೆಸಿದ್ದ ಮುಖ್ಯಮಂತ್ರಿ ಯಾರು ಎಂಬ ಅವಲೋಕನ ಇಲ್ಲಿದೆ.
ರಾಜ್ಯದ ಒಂಬತ್ತನೇ ಮುಖ್ಯಮಂತ್ರಿಯಾಗಿದ್ದ ಡಿ. ದೇವರಾಜ್ ಅರಸ್ ಅವರು ಎರಡು ಪ್ರತ್ಯೇಕ ಅವಧಿಗಳಲ್ಲಿ ಗರಿಷ್ಠ 2,790 ದಿನಗಳ ಕಾಲ ಅಧಿಕಾರದಲ್ಲಿದ್ದರು. ಅವರ ನಂತರದ ಸ್ಥಾನ ಕಾಂಗ್ರೆಸ್ ಪಕ್ಷದ ಎಸ್ ನಿಜಲಿಂಗಪ್ಪ ಅವರಿಗೆ ಸಲ್ಲುತ್ತದೆ. ಅವರು ಎರಡು ಅವಧಿಗಳಲ್ಲಿ ಒಟ್ಟು 2,729 ದಿನಗಳ ಕಾಲ ಸಿಎಂ ಆಗಿದ್ದರು, ಅವರು ಕರ್ನಾಟಕದ ನಾಲ್ಕನೇ ಮತ್ತು ಏಳನೇ ಮುಖ್ಯಮಂತ್ರಿ ಆಗಿದ್ದರು.

(ಡಿ. ದೇವರಾಜ್ ಅರಸ್ /Photo:DH)
ನಿಜಲಿಂಗಪ್ಪ ಮೊದಲು ಸಿಎಂ ಆಗಿದ್ದು 1956ರಲ್ಲಿ ಆಗ ಅವರು ಎರಡು ವರ್ಷಗಳಿಗೂ ಕಡಿಮೆ ಸಮಯ ಅಧಿಕಾರದಲ್ಲಿದ್ದರೆ. ಎರಡನೇ ಬಾರಿಗೆ 1962ರಲ್ಲಿ ಸಿಎಂ ಆಗಿ ಎರಡನೇ ಬಾರಿ ಆಯ್ಕೆಯಾಗಿದ್ದರು.
ಅತ್ಯಂತ ದೀರ್ಘ ಅವಧಿಗೆ ಮುಖ್ಯಮಂತ್ರಿ ಆದವರ ಪೈಕಿ ಮೂರನೇ ಸ್ಥಾನದಲ್ಲಿ ರಾಮಕೃಷ್ಣ ಹೆಗಡೆ ಇದ್ದಾರೆ ಅವರು ವಿವಿಧ ಅವಧಿಗಳಲ್ಲಿ ಒಟ್ಟು 1,967 ದಿನಗಳ ಕಾಲ ಸಿಎಂ ಆಗಿದ್ದರು.

(ರಾಮಕೃಷ್ಣ ಹೆಗಡೆ /Photo:DH)
ನಂತರದ ಸ್ಥಾನಗಳಲ್ಲಿ ಬಿ ಎಸ್ ಯಡಿಯೂರಪ್ಪ (1,901 ದಿನಗಳು), ಸಿದ್ದರಾಮಯ್ಯ (1,828 ದಿನಗಳು), ಎಸ್ ಎಂ ಕೃಷ್ಣ (1,691 ದಿನಗಳು), ಕೆ ಚೆಂಗಳರಾಯ ರೆಡ್ಡಿ (1,618 ದಿನಗಳು), ಕೆ ಹನುಮಂತಯ್ಯ (1,603 ದಿನಗಳು), ಬಿ ಡಿ ಜತ್ತಿ (1,391 ದಿನಗಳು) ಹಾಗೂ ವೀರೇಂದ್ರ ಪಾಟೀಲ್ (1,337 ದಿನಗಳು) ಮುಖ್ಯಮಂತ್ರಿ ಆಗಿ ಸೇವೆ ಸಲ್ಲಿಸಿದ್ದಾರೆ.
ರಾಜ್ಯದ ನೂತನ ಮುಖ್ಯಮಂತ್ರಿಯಾಗಲಿರುವ ಸಿದ್ದರಾಮಯ್ಯ ಕಳೆದ 40 ವರ್ಷಗಳಲ್ಲಿ ಸಂಪೂರ್ಣ ಐದು ವರ್ಷ ಆಡಳಿತ ನಡೆಸಿದ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿದ್ದಾರೆ. ದೇವರಾಜ್ ಅರಸ್ ಅವರ ನಂತರ ರಾಜ್ಯದಲ್ಲಿ ಸಂಪೂರ್ಣ ಐದು ವರ್ಷ ಆಡಳಿತ ಪೂರೈಸಿದ ಎರಡನೇ ಸಿಎಂ ಆಗಿದ್ದಾರೆ ಸಿದ್ದರಾಮಯ್ಯ.
ಮೇ 2013ರಲ್ಲಿ ರಾಜ್ಯದ 28ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿದ್ದ ಸಿದ್ದರಾಮಯ್ಯ ಮೇ 15, 2018ರ ತನಕ ಸೀಎಂ ಆಗಿದ್ದರು. ಜನತಾ ದಳ ಮತ್ತು ಜೆಡಿ(ಎಸ್) ಪಕ್ಷಗಳ ಈ ಹಿಂದಿನ ಸರ್ಕಾರಗಳ ಅವಧಿಯಲ್ಲಿ ಅವರು ಉಪಮುಖ್ಯಮಂತ್ರಿಯಾಗಿದ್ದರು.
ಒಂದು ವರ್ಷಕ್ಕೂ ಕಡಿಮೆ ಅವಧಿಗೆ ಮುಖ್ಯಮಂತ್ರಿ ಆದವರು ರಾಜ್ಯದಲ್ಲಿ ಒಂಬತ್ತು ಮಂದಿ. ಕಡಿದಾಳ್ ಮಂಜಪ್ಪ ಅವರು ಆಗಸ್ಟ್ 19, 1956ರಲ್ಲಿ ಸಿಎಂ ಆಗಿ ಅಧಿಕಾರ ವಹಿಸಿ ಕೇವಲ 73 ದಿನ ಅಧಿಕಾರದಲ್ಲಿದ್ದರು. ರಾಜ್ಯದ ಅರ್ಧದಷ್ಟು ಸಿಎಂಗಳು ಎರಡು ವರ್ಷಗಳಿಗೂ ಕಡಿಮೆ ಅವಧಿಗೆ ಸಿಎಂ ಆಗಿದ್ದರು.
ರಾಜ್ಯದಲ್ಲಿ ಆರು ಬಾರಿ ರಾಷ್ಟ್ರಪತಿ ಆಡಳಿತ ಹೇರಲ್ಪಟ್ಟಿತ್ತು. ಮೊದಲು ಮಾರ್ಚ್ 19, 1971ರಲ್ಲಿ ಆಗಿನ ವೀರೇಂದ್ರ ಪಾಟೀಲ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಹೇರಲಾಗಿತ್ತು. ಈ ರಾಷ್ಟ್ರಪತಿ ಆಳ್ವಿಕೆ ಸುಮಾರು ಒಂದು ವರ್ಷದ ತನಕ ಇತ್ತು. ರಾಜ್ಯದ ಅತ್ಯಂತ ದೀರ್ಘಾವಧಿಯ ರಾಷ್ಟ್ರಪತಿ ಆಡಳಿತ ಇದಾಗಿತ್ತು. ನವೆಂಬರ್ 2007ರಲ್ಲಿ ಆರು ತಿಂಗಳ ಕಾಲ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು.
1947 ರಿಂದ ಸಿಎಂ ಆಗಿ ಸೇವೆ ಸಲ್ಲಿಸಿದವರ ಪೈಕಿ ಒಂಬತ್ತು ಮಂದಿ ಲಿಂಗಾಯತ ಸಮುದಾಯದವರಾಗಿದ್ದರೆ ಏಳು ಮಂದಿ ಒಕ್ಕಲಿಗರಾಗಿದ್ದರು, ಮೂವರು ಒಬಿಸಿ, ಇಬ್ಬರು ಬ್ರಾಹ್ಮಣ ಸಮುದಾಯದವರು ಹಾಗೂ ಇತರ ಸಮುದಾಯದ ಇಬ್ಬರು ಸಿಎಂ ಆಗಿದ್ದರು.
ಕೃಪೆ: indiatoday.in







