ಕನ್ನಡ ಪರಂಪರೆ ಮತ್ತು ಕಾರ್ನಾಡರ ಕನಸುಗಳು!
ಇಂದು ಗಿರೀಶ್ ಕಾರ್ನಾಡ್ ಜನ್ಮದಿನ

ಕಾರ್ನಾಡ್ ಎಂದರೇ ಕನಸುಗಳ ಮಳೆ. ‘‘ಬೆಳಕೇ ಇಲ್ಲದ ದಾರಿಯಲ್ಲಿ ನಡೆಯಬಹುದು. ಆದರೆ ಕನಸುಗಳೇ ಇಲ್ಲದ ದಾರಿಯಲ್ಲಿ ಹೇಗೆ ನಡೆಯಲಿ?’’ ಇದು ಯಯಾತಿ ನಾಟಕದ ಸ್ವಗತ. ಅವರ ನಾಟಕಗಳಲ್ಲಿ ಬರುವ ಪಾತ್ರಗಳ ಒಳ ಸಂಘರ್ಷ ಸ್ವತಃ ಕಾರ್ನಾಡರು ಎದುರಿಸಿದ ಒಳ ಸಂಘರ್ಷಗಳು ಕೂಡ. ಆ ಸಂಘರ್ಷದ ಮಳೆಗೆ ಚಿಗುರಿದ ಕನಸುಗಳೇ ಅವರ ನಾಟಕಗಳು.
ವೃದ್ಧಾಪ್ಯದಲ್ಲಿ ನರಳುವ ಯಯಾತಿಯ ಯವ್ವನದ ಕನಸು, ತುಘಲಕನ ರಾಜಕೀಯ ಪರಿವರ್ತನೆಯ ಕನಸು, ಪತಿಯ ತಲೆಯ ಜೊತೆಗೆ ಕಪಿಲನ ದೇಹವನ್ನು ತನ್ನದಾಗಿಸಿಕೊಳ್ಳುವ ಪದ್ಮಿನಿಯ ತಲೆದಂಡದ ಕನಸು, ಬ್ರಿಟಿಷರಿಂದ ತನ್ನ ನೆಲವನ್ನು ಬಿಡುಗಡೆಗೊಳಿಸುವುದರ ಜೊತೆಜೊತೆಗೇ ತಾಯ್ನೆಲದ ಮಣ್ಣಿನ ಆಳಕ್ಕಿಳಿದ ಬೇರಿಗೆ ಆಕಾಶದ ರೆಕ್ಕೆಯನ್ನು ಜೋಡಿಸುವ ಟಿಪ್ಪುವಿನ ಕನಸು...ವಾಸ್ತವದ ಮುಖಾಮುಖಿಯಲ್ಲಿ ಖಿನ್ನತೆ, ವಿಷಾದವಾಗಿ ಅವುಗಳು ಹೊರಡಿಸುವ ಆರ್ತಧ್ವನಿಯನ್ನು ಪ್ರತೀ ನಾಟಕಗಳಲ್ಲಿ ಕಾಣಬಹುದು. ತುಘಲಕ್, ಟಿಪ್ಪು, ರಾಮರಾಯ ಮೊದಲಾದ ಪಾತ್ರಗಳು ಐತಿಹಾಸಿಕವಾದುವೇ ಆಗಿದ್ದರೂ, ಅವು ಕಾಣುವ ಕನಸುಗಳು ಇಂದಿನ ರಾಜಕೀಯ ದುರಂತದ ರೂಪಕಗಳು. ಕಾರ್ನಾಡ್ ಅವರು ವರ್ತಮಾನದ ರಾಜಕೀಯ ಸಂಗತಿಗಳನ್ನು ಚರ್ಚಿಸಲು ಪುರಾಣ ಮತ್ತು ಇತಿಹಾಸವನ್ನು ಪದೇ ಪದೇ ಮೊರೆ ಹೋದವರು. ತುಘಲಕ್, ಟಿಪ್ಪು ಸುಲ್ತಾನನ ಕನಸುಗಳು, ರಕ್ಕಸ ತಂಗಡಿಗಳ ಮೂಲಕ ಅವರಿಗೆ ಇತಿಹಾಸವನ್ನು ಮರು ನಿರೂಪಿಸುವುದಷ್ಟೇ ಮುಖ್ಯವಾಗಿರಲಿಲ್ಲ. ಇಂದಿನ ರಾಜಕೀಯ ವಿಲಕ್ಷಣಗಳನ್ನು ಅವರು ಆ ನಾಟಕಗಳಲ್ಲಿ ವಿಮರ್ಶಿಸಿದರು.
ಮೋದಿ ಈ ದೇಶದ ಪ್ರಧಾನಿಯಾಗುವ ಮೊದಲೇ ಹಲವು ವರ್ಷಗಳ ಹಿಂದೆ ಬರೆದಿದ್ದ, ಆಗಲೇ ನೂರಾರು ಪ್ರದರ್ಶನಗಳನ್ನು ಕಂಡಿದ್ದ ತುಘಲಕ್ನಲ್ಲಿ ಮೋದಿಯ ವ್ಯಕ್ತಿತ್ವದ ವಿಲಕ್ಷಣಗಳನ್ನು ಗುರುತಿಸಿದವರಿದ್ದಾರೆ. ನೋಟು ನಿಷೇಧ, ಲಾಕ್ಡೌನ್ನಂತಹ ನಿರ್ಧಾರಗಳು ಜನಸಾಮಾನ್ಯರ ಬದುಕಿನ ಮೇಲೆ ಉಂಟು ಮಾಡುವ ಪರಿಣಾಮಗಳನ್ನು ತುಘಲಕ್ನ ನಿರ್ಧಾರಗಳ ವೈಫಲ್ಯಗಳಲ್ಲಿ ಗುರುತಿಸಬಹುದು. ಕಾರ್ನಾಡರ ನಾಟಕಗಳು ತಳೆಯುವ ರಾಜಕೀಯ ನಿಲುವುಗಳ ಕಾರಣಕ್ಕಾಗಿ ಇಂದಿಗೂ ಈ ನೆಲದ ಸನಾತನ ಶಕ್ತಿಗಳಿಂದ ಪ್ರತಿರೋಧಗಳನ್ನು ಎದುರಿಸುತ್ತಿದ್ದಾರೆ.
ಕಾರ್ನಾಡರನ್ನು ವಿರೋಧಿಸುವ ಭರದಲ್ಲಿ, ಅವರ ಪಾತ್ರಗಳಿಗೆ ಪರ್ಯಾಯಗಳಾಗಿ ‘ಉರಿ ಗೌಡ, ನಂಜೇಗೌಡ’ರನ್ನು ಹುಟ್ಟಿಸಿ ಅವುಗಳಿಗೆ ಜೀವಕೊಡಲು ಸೋತು ಕಟ್ಟ ಕಡೆಗೆ ನಗೆಪಾಟಲಿಗೀಡಾಗುವ ಇಂದಿನ ರಾಜಕಾರಣದ ಅಡ್ಡಂಡ, ಸಿ.ಟಿ. ರವಿಯಂಥವರನ್ನು ಅವರ ತುಘಲಕ್ ನಾಟಕಗಳಲ್ಲಿ ಬರುವ ಸಣ್ಣ ಪುಟ್ಟ ಕ್ಷುದ್ರ ಪಾತ್ರಗಳಲ್ಲಿ ನೋಡಬಹುದು. ಕಾರ್ನಾಡರ ಕನಸುಗಳು ಕೇವಲ ನಾಟಕಗಳಿಗಷ್ಟೇ ಸೀಮಿತ ಅಲ್ಲ, ನಿಧಾನಕ್ಕೆ ಅದು ರಂಗ ಪರದೆಯಿಂದ ಇಳಿದು ನಮ್ಮ ಬೀದಿ, ಓಣಿಗಳ ಮೂಲಕ ರಾಜಹೆದ್ದಾರಿಗಳಿಗೆ ತಮ್ಮ ಪಾದಗಳನ್ನು ಊರುತ್ತವೆ.
ಕಾರ್ನಾಡರ ಕನಸುಗಳ ವಿರುದ್ಧ ನಿರಂತರ ಊಳಿಡುತ್ತಿದ್ದ ವರ್ತಮಾನದ ಈ ಕ್ಷುದ್ರ ಪಾತ್ರಗಳು ಚುನಾವಣೆಯ ಫಲಿತಾಂಶದ ಬಳಿಕ ಏಕಾಏಕಿ ಉರಿಗೌಡ-ನಂಜೇಗೌಡರಂತೆಯೇ ಉರಿದು ಬೂದಿಯಾಗಿರುವುದನ್ನು ನಾವು ಗ್ರಹಿಸಬೇಕಾದುದು ಮತ್ತೆ ಕಾರ್ನಾಡರ ನಾಟಕಗಳ ಮೂಲಕವೇ ಆಗಿದೆ. ಸುಮಾರು 14 ನಾಟಕಗಳನ್ನು ಬರೆದ ಗಿರೀಶ್ ಕಾರ್ನಾಡರು ತಮ್ಮ ಕೃತಿಗಳಿಗಾಗಿ ಅಂತರ್ರಾಷ್ಟ್ರೀಯ ಮನ್ನಣೆಯನ್ನು ಪಡೆದವರು. ಕನ್ನಡದಲ್ಲಿ ಕಲಾತ್ಮಕ ಚಿತ್ರಗಳು ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವಾಗ ಅಲ್ಲೂ ತನ್ನ ಕೈಚಳಕವನ್ನು ಪ್ರದರ್ಶಿಸಿದರು.
ಗಿರೀಶ್ ಕಾರ್ನಾಡ್-ಪ್ರಾಣೇಶಾಚಾರ್ಯ-ಅನಂತಮೂರ್ತಿ ಒಂದನ್ನೊಂದು ಬೆಸೆದುಕೊಂಡ ವ್ಯಕ್ತಿತ್ವಗಳಿವು. ‘ಸಂಸ್ಕಾರ’ದಲ್ಲಿ ಬರುವ ಪ್ರಾಣೇಶಾಚಾರ್ಯನ ಪಾತ್ರ, ಅನಂತಮೂರ್ತಿಯ ಸೃಜನಶೀಲ ವ್ಯಕ್ತಿತ್ವವನ್ನು ಬಿಡದೇ ಕಾಡಿತ್ತು. ಆ ಪಾತ್ರದ ಮೂಲಕವೇ ಕಾರ್ನಾಡ್ ಸಿನೆಮಾರಂಗವನ್ನು ಪ್ರವೇಶಿಸಿದ್ದು ಕಾಕತಾಳೀಯವೆ? ಎಂದು ಕೇಳಿಕೊಳ್ಳುವಷ್ಟು ವಿಸ್ಮಯವುಂಟು ಮಾಡುತ್ತದೆ ‘ಸಂಸ್ಕಾರ’ ಸಿನಿಮಾ. ಸಂಸ್ಕಾರದ ಬಳಿಕ ಕಾರ್ನಾಡ್ ವಂಶವೃಕ್ಷ, ತಬ್ಬಲಿ ನೀನಾದೆ ಮಗನೆ ಎಂಬ ಭೈರಪ್ಪರ ಕಾದಂಬರಿಗಳನ್ನೂ ಸಿನೆಮಾ ಮಾಡಿದರು. ಅದು ಪ್ರತಿಪಾದಿಸುವ ಬಲಪಂಥೀಯ ನಿಲುವುಗಳು ಕಾರ್ನಾಡರನ್ನು ಯಾವ ರೀತಿಯಲ್ಲಿ ಆಕರ್ಷಿಸಿದವು ಎನ್ನುವುದು ನಿಗೂಢವೇ ಆಗಿದೆ.
‘‘ಭೈರಪ್ಪರ ಕಾದಂಬರಿಗಳನ್ನು ನಿರ್ದೇಶಿಸಿ ನಾನು ತಪ್ಪು ಮಾಡಿದೆ’’ ಎಂದು ನಿಧರಾಗುವುದಕ್ಕೆ ಮುನ್ನ ಅವರು ಮಾಧ್ಯಮಗಳ ಮೂಲಕ ತೋಡಿಕೊಂಡಿದ್ದರು ಎನ್ನುವುದು ಮುಖ್ಯವಾಗಿದೆ. ಇದೇ ಸಂದರ್ಭದಲ್ಲಿ, ‘ಒಂದಾನೊಂದು ಕಾಲದಲ್ಲಿ’ ಎನ್ನುವ ಒಂದು ಸಿನೆಮಾ, ಗಿರೀಶ್ ಕಾರ್ನಾಡ್ರನ್ನು ಕನ್ನಡ ಚಿತ್ರೋದ್ಯಮದಲ್ಲಿ ಶಾಶ್ವತವಾಗಿಸಿತು. ಕಾಡು ಅವರಿಗೆ ಪ್ರಶಸ್ತಿಗಳನ್ನು ತಂದುಕೊಟ್ಟ ಇನ್ನೊಂದು ಪ್ರಮುಖ ಚಿತ್ರ. ರಾಷ್ಟ್ರ ಪ್ರಶಸ್ತಿಯನ್ನು ಪಡೆದ ‘ಕಾನೂರು ಹೆಗ್ಗಡತಿ’ ಸಿನೆಮಾದ ಬಗ್ಗೆ ಹತ್ತು ಹಲವು ಪರ ವಿರೋಧ ವಿಮರ್ಶೆಗಳನ್ನು ನಾವು ಕಾಣಬಹುದು.
ಕುವೆಂಪು ಕಾದಂಬರಿಯನ್ನು ದೃಶ್ಯ ಮಾಧ್ಯಮಗಳಲ್ಲಿ ಹಿಡಿದಿಡಲು ಮಾಡಿದ ಅವರ ಸಾಹಸಕ್ಕಾಗಿ ಮೊದಲು ಅಭಿನಂದಿಸಬೇಕು. ಯಾಕೆಂದರೆ, ಕುವೆಂಪು ಅವರ ದಟ್ಟ ವರ್ಣನೆಯಲ್ಲಿ ಹರಡಿಕೊಂಡ ಪ್ರಕೃತಿಗೆ ವಾಸ್ತವ ರೂಪವನ್ನು ಕೊಡುವುದು ಸಾಧ್ಯವಿಲ್ಲ ಎನ್ನುವುದು ಸಿನೆಮಾಗಳಲ್ಲಿ ಅದಾಗಲೇ ತೊಡಗಿಸಿಕೊಂಡು ಯಶಸ್ವಿಯಾಗಿರುವ ಕಾರ್ನಾಡರಿಗೆ ಗೊತ್ತಿತ್ತು. ಕಾರ್ನಾಡರಿಗೆ ಎರಡು ರೀತಿಯ ಜನಪ್ರಿಯ ಮುಖಗಳಿವೆ. ಒಂದು, ಹಿಂದಿ ಮತ್ತು ಕನ್ನಡ ಸಿನೆಮಾಗಳಲ್ಲಿ ಖಳನಾಯಕ, ಪೋಷಕ ಪಾತ್ರಗಳ ಜನಪ್ರಿಯ ಮುಖ. ಕಾರ್ನಾಡ್ ಈ ಪಾತ್ರಗಳ ಮೂಲಕ ದೊಡ್ಡ ಮಟ್ಟದ ಮಧ್ಯಮ ವರ್ಗದ ಅಭಿಮಾನಿಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಇನ್ನೊಂದು ಅಡ್ಡಂಡ ಕಾರ್ಯಪ್ಪರಂತಹ ರಾಜಕೀಯ ಅಡ್ನಾಡಿಗಳು ಕಟ್ಟಿಕೊಟ್ಟಂತಹ ಜನಪ್ರಿಯ ಮುಖ.
ರಂಗಾಯಣದಂತಹ ಸೃಜನಶೀಲ ವೇದಿಕೆಯನ್ನು ತನ್ನ ರಾಜಕೀಯಕ್ಕೆ ಬಳಸಿ ಅಪಹಾಸ್ಯಕ್ಕೀಡಾಗಿ ಅಡ್ಡಂಡ ಕಾರ್ಯಪ್ಪ ತಾನು ಸೃಷ್ಟಿಸಿದ ಪಾತ್ರಗಳಾದ ಉರಿ ಮತ್ತು ನಂಜುಗಳ ಜೊತೆಗೆ ಇದೀಗ ಕಸದ ತೊಟ್ಟಿ ಸೇರಿದ್ದಾರೆ. ಕಾರ್ನಾಡರ ನಾಟಕಗಳ ಪಾತ್ರಗಳು ಕಂಡ ಕನಸುಗಳು ನಿಜಕ್ಕೂ ಈ ಕರ್ನಾಟಕ ಕಂಡ ಕನಸು ಗಳಾಗಿದ್ದವು. ಆ ಕನಸುಗಳ ಮೇಲೆ ನಡೆಯುವ ಯಾವುದೇ ದಾಳಿಗಳು ಕರ್ನಾಟಕ ಪ್ರತಿಪಾದಿಸುತ್ತಾ ಬಂದ ವೌಲ್ಯಗಳ ಮೇಲೆ ನಡೆಯುವ ದಾಳಿಗಳಾಗಿದ್ದವು. ಆ ಪರಂಪರೆಯೇ ಆ ದಾಳಿಗೆ ಪ್ರತಿಯಾಗಿ ಉತ್ತರಿಸುತ್ತದೆ.
ಕಳೆದ ಚುನಾವಣೆ ಯಲ್ಲಿ ಆ ಕನ್ನಡ ಪರಂಪರೆ ಕಾರ್ನಾಡರ ಕನಸುಗಳ ಮೇಲಿನ ದಾಳಿಕೋರರಿಗೆ ಪರಿಣಾಮಕಾರಿ ಉತ್ತರ ವನ್ನು ನೀಡಿತು. ಆಕಸ್ಮಿಕವೆಂಬಂತೆ, ಕಾರ್ನಾಡರ ಹುಟ್ಟಿದ ದಿನದಂತೆ ಹೊಸ ಸರಕಾರವೊಂದು ಅಧಿಕಾರ ಹಿಡಿಯುತ್ತಿದೆ. ಕಾರ್ನಾಡರ ಕನಸುಗಳಿಗೆ ಜೀವ ತುಂಬುವ ಮಾತುಗಳನ್ನಾಡುತ್ತಿದೆ. ಇದು ನಿಜಕ್ಕೂ ಕರ್ನಾಟಕದ ಭವಿಷ್ಯದ ಕುರಿತಂತೆ ಭರವಸೆ ಹುಟ್ಟಿಸುವ ಬೆಳವಣಿಗೆ.







