ಪುತ್ತೂರಿನಲ್ಲಿ ನಡೆದ ಘಟನೆಯ ಸತ್ಯವನ್ನು ಎಲ್ಲಿಗೆ ತಲುಪಿಸಬೇಕೋ ಅಲ್ಲಿಗೆ ತಲುಪಿಸುತ್ತೇನೆ: ಶಾಸಕ ಯತ್ನಾಳ್
"ದೌರ್ಜನ್ಯ ಪ್ರಕರಣದ ರೂವಾರಿ ಡಿವೈಎಸ್‍ಪಿಯನ್ನು ತಕ್ಷಣ ಅಮಾನತುಗೊಳಿಸಬೇಕು"

ಪುತ್ತೂರು: ಹಿಂದೂ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಿದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಆದರೆ ದೌರ್ಜನ್ಯ ಪ್ರಕರಣದಲ್ಲಿ ಪ್ರಮುಖ ಪಾತ್ರವಹಿಸಿರುವ ಡಿವೈಎಸ್ಪಿಯನ್ನು ತಕ್ಷಣ ವಜಾಗೊಳಿಸಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.
ಅವರು ಬಿಜೆಪಿ ನಾಯಕರ ಬ್ಯಾನರ್‍ಗೆ ಚಪ್ಪಲಿ ಹಾರ ಹಾಕಿದ ಪ್ರಕರಣ ಸಂಬಂಧಿಸಿದಂತೆ ಪೊಲೀಸ್ ದೌರ್ಜನ್ಯಕ್ಕೆ ಒಳಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಅಭಿ ಯಾನೆ ಅವಿನಾಶ್ ಮತ್ತು ಗುರುಪ್ರಸಾದ್ ಅವರನ್ನು ಶುಕ್ರವಾರ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಯತ್ನಾಳ್ ಅವರು ರಾಜ್ಯದಲ್ಲಿ ಮತ್ತೆ ತಾಲಿಬಾನ್ ಸರ್ಕಾರ ಬರುತ್ತಿದೆ. ಹಿಂದೆ ಕಾಂಗ್ರೆಸ್ ಆಡಳಿತದಲ್ಲಿ ಗೋರಕ್ಷಕರ ಹತ್ಯೆ, ಕಾರ್ಯಕರ್ತರ ಹತ್ಯೆ ನಡೆದಿತ್ತು. ಇದೀಗ ಮತ್ತೆ ಬಿಜೆಪಿ ಕಾರ್ಯಕರ್ತರಲ್ಲಿ ಅನಾಥ ಪ್ರಜ್ಞೆ ಕಾಡುತ್ತಿದೆ. ಹಿಂದೂಗಳ ರಕ್ಷಣೆ ಬಿಜೆಪಿ ಕರ್ತವ್ಯವಾಗಿದೆ. ಪುತ್ತೂರಿನಲ್ಲಿ ನಡೆದ ಘಟನೆಯ ವಾಸ್ತವಿಕ ತನಿಖೆಯಾಗಬೇಕು. ಯಾರದೇ ಒತ್ತಡಕ್ಕೆ ಪೊಲೀಸರು ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಕೆಲವು ಪೊಲೀಸ್ ಅಧಿಕಾರಿಗಳು ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ನಾಳೆ ಕಾಂಗ್ರೆಸ್ ನವರು ಕೊಲೆ ಮಾಡಿ ಎಂದರೆ ಪೊಲೀಸರು ಕೊಲೆ ಮಾಡುತ್ತಾರೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ. ವಿಧಾನಸಭೆಯಲ್ಲಿ ಈ ವಿಚಾರ ಪ್ರಸ್ತಾಪ ಮಾಡಲಾಗುವುದು ಎಂದರು.
ಪುತ್ತೂರಿನಲ್ಲಿ ನಡೆದಿರುವ ಘಟನೆಯ ಒಳಗಿನ ಸತ್ಯ ನಮಗೆ ಗೊತ್ತಾಗಿದೆ. ಅದನ್ನು ಎಲ್ಲಿಗೆ ತಲುಪಿಸಬೇಕೋ ಅಲ್ಲಿಗೆ ತಲುಪಿಸುತ್ತೇನೆ. ನಮ್ಮಿಂದ ತಪ್ಪಾದಾಗ ಒಪ್ಪಿಕೊಳ್ಳುವುದು ಉತ್ತಮ ಲಕ್ಷಣ. ಚುನಾವಣೆಯ ಸಂದರ್ಭದಲ್ಲಿ ಪ್ರಾರಂಭವಾದ ಅಸಮಾಧಾನದಿಂದ ಹಿಂದೂಗಳು ಪಕ್ಷೇತರ ಅಭ್ಯರ್ಥಿ ಜತೆಗಿದ್ದಾರೆ. ಹಾಗೆಂದು ಅವರು ಬಿಜೆಪಿ ಕಾರ್ಯಕರ್ತರೇ ಆಗಿದ್ದಾರೆ. ಈ ಗೊಂದಲವನ್ನು ಕೇಂದ್ರದ ನಾಯಕರು ಸರಿಪಡಿಸಲಿದ್ದಾರೆ. ಈ ವಿಚಾರವನ್ನು ಕೇಂದ್ರ ನಾಯಕರಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತೇನೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ದೊರೆತಲ್ಲಿ ಬಿಜೆಪಿಯಿಂದ ಅಸಮಾಧಾನಗೊಂಡು ಹೊರಗುಳಿದ ಎಲ್ಲರನ್ನೂ ಪ್ರೀತಿಯಿಂದ ಮತ್ತೆ ಪಕ್ಷಕ್ಕೆ ಕರೆತರುವ ಕೆಲಸ ಮಾಡಲಿದ್ದೇನೆ. ಈ ಸರ್ಕಾರ ಹಿಂದೂ ವಿರೋಧಿ ಧೋರಣೆ ಅನುಸರಿಸಿದರೆ ಅದನ್ನು ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಅವರು ಹೇಳಿದರು.
ರೂ.1 ಲಕ್ಷ ಸಹಾಯಹಸ್ತ
ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಚಕಿತ್ಸೆ ಪಡೆಯುತ್ತಿರುವ ಅವಿನಾಶ್ ಮತ್ತು ಗುರುಪ್ರಸಾದ್ ಅವರಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮ ವೈಯುಕ್ತಿಕ ನೆಲೆಯಲ್ಲಿ ರೂ. 1ಲಕ್ಷ ಸಹಾಯಹಸ್ತ ನೀಡಿದರು. ಈ ಪೊಲೀಸ್ ದೌರ್ಜನ್ಯಕ್ಕೆ ಒಳಗಾದ ಯುವಕರಿಗೆ ಸೂಕ್ತ ಪರಿಹಾರವನ್ನು ಸರ್ಕಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ, ಆಸ್ಪತ್ರೆಯ ವೈದ್ಯ ಸುರೇಶ್ ಪುತ್ತೂರಾಯ ಮತ್ತಿತರರು ಉಪಸ್ಥಿತರಿದ್ದರು.