ಸದಾನಂದ ಗೌಡ, ನಳಿನ್ ತಾಳಕ್ಕೆ ಕುಣಿದ ಪೊಲೀಸರಿಂದ ಹಲ್ಲೆ: ಕಾಂಗ್ರೆಸ್ ಆರೋಪ

ಪುತ್ತೂರು: ಪುತ್ತೂರಿನಲ್ಲಿ ನಡೆದ ಪೊಲೀಸರಿಂದ ಹಲ್ಲೆ ಪ್ರಕರಣದಲ್ಲಿ ಡಿ.ವಿ. ಸದಾನಂದ ಗೌಡ ಹಾಗೂ ನಳಿನ್ ಕಟೀಲ್ ನೇರ ಭಾಗಿಯಾಗಿದ್ದಾರೆ. ಅವರ ತಾಳಕ್ಕೆ ತಕ್ಕಂತೆ ಕುಣಿದ ಡಿವೈಎಸ್‍ಪಿ ಅವರು ಬ್ಯಾನರ್ ಅಳವಡಿಸಿದ ಆರೋಪಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಅವರೇ ಎಸ್‍ಪಿಗೆ ಒತ್ತಡ ಹಾಕಿ ಪೊಲೀಸ್ ಅಧಿಕಾರಿಗಳ ಅಮಾನತುಗೊಳಿಸಿದ್ದಾರೆ. ಇಂತಹ ರಾಜಕಾರಣಿಗಳ ತಾಲಕ್ಕೆ ತಕ್ಕಂತೆ ಕುಣಿಯುವ ಅಧಿಕಾರಿಗಳಿಗೆ, ಮುಂದಕ್ಕೆ ಕಾನೂನು ಮೀರಿ ನಡೆಯುವ ಪೊಲೀಸರಿಗೆ ಇದೊಂದು ಪಾಠವಾಗಿದೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ ಆರೋಪಿಸಿದ್ದಾರೆ.
ಅವರು ಶುಕ್ರವಾರ ಪುತ್ತೂರು ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿ ತಾವು ಮಾಡಿರುವ ಅನ್ಯಾಯವನ್ನು ಬಿಜೆಪಿಗರು ಇದೀಗ ಕಾಂಗ್ರೆಸ್‍ನ ತಲೆಗೆ ಕಟ್ಟಲು ಪ್ರಯತ್ನ ನಡೆಸುತ್ತಿದ್ದಾರೆ. ನಳಿನ್ ಕುಮಾರ್ ಕಟೀಲ್ ಹಾಗೂ ಡಿ.ವಿ ಸದಾನಂದ ಗೌಡರ ಭಾವ ಚಿತ್ರಕ್ಕೆ ಚಪ್ಪಲಿ ಹಾರ ಹಾಕಿದರೆ ಕಾಂಗ್ರೆಸ್ ಪಕ್ಷದವರು ಏಕೆ ಒತ್ತಡ ಹೇರಬೇಕು. ಅವರೇನು ಸ್ವಾತಂತ್ರ್ಯ ಹೋರಾಟಗಾರರೇ? ಎಂದು ಪ್ರಶ್ನಿಸಿದ ಅವರು, ಇಂತಹ ಘಟನೆಗಳು ಅನೇಕ ಸಂದರ್ಭದಲ್ಲಿ ಬೇರೆ ಕಡೆಗಳಲ್ಲಿಯೂ ನಡೆದಿದೆ. ಅದೊಂದು ಗಂಭೀರ ಆರೋಪವಲ್ಲ. ನಗರ ಠಾಣೆಯಲ್ಲಿ ವಿಚಾರಣೆ ಮಾಡಬೇಕಾದ ಪ್ರಕರಣವನ್ನು ಡಿವೈಎಸ್ಪಿ ಕಚೇರಿಯಲ್ಲಿ ಸಂಪ್ಯ ಪೊಲೀಸರನ್ನು ಕರೆಯಿಸಿ ವಿಚಾರಣೆ ನಡೆಸುವ ನೆಪದಲ್ಲಿ ಹಲ್ಲೆ ನಡೆಸಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಕೇಂದ್ರ ಮಾಜಿ ಸಚಿವ ಸದಾನಂದ ಗೌಡರವರ ಡಿವೈಎಸ್‍ಪಿ ಮೇಲೆ ಒತ್ತಡ ಹೇರಿ ಹಲ್ಲೆ ನಡೆಸಿದ್ದಾರೆ. ಆದರೆ ಪ್ರಭಾಕರ ಭಟ್ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಹರೀಶ್ ಪೂಂಜ ಬೆಳ್ತಂಗಡಿಯಲ್ಲಿ ಸಾಕಷ್ಟು ಕೆಲಸವಿದ್ದರೂ ಇಲ್ಲಿಗೆ ಬಂದು ಲಾಭ ಪಡೆಯಲು ಯತ್ನಿಸುತ್ತಾರೆ. ಅರುಣ್ ಪುತ್ತಿಲ ಅವರು ನೇರವಾಗಿ ಮಾತನಾಡದೆ ಜಾರಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಪೊಲೀಸರಿಂದ ನಡೆದ ಹಲ್ಲೆಯನ್ನು ಪ್ರಥಮ ಭಾರಿಗೆ ತೀವ್ರವಾಗಿ ಖಂಡಿಸಿದವರು ನಮ್ಮ ಶಾಸಕ ಅಶೋಕ್ ಕುಮಾರ್ ರೈಯವರು. ಹಾಗಿದ್ದರೂ ಅಶೋಕ್ ರೈಯವರು ಶಾಸಕರಾಗಿ ಗೆದ್ದ ಬಳಿಕ ಹೀಗಾಗುತ್ತಿದೆ ಎಂದು ಅವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಾರೆ. ಘಟನೆಯ ಬಗ್ಗೆ ದೂರು ಕೊಟ್ಟವರು, ಪ್ರತಿಭಟನೆ ನಡೆಸಿದವರು ಯಾರೆಂದು ಗೊತ್ತಿದ್ದರೂ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಾರೆ ಎಂದು ದೂರಿದರು.
ಈ ಪ್ರಕರಣದಲ್ಲಿ ಸಾಜ ರಾಧಾಕೃಷ್ಣ ಆಳ್ವ ಹಾಗೂ ನಗರ ಮಂಡಲದ ಅಧ್ಯಕ್ಷ ಪಿ.ಜಿ ಜಗನ್ನಿವಾಸ ರಾವ್ ದೂರು ಮೊದಲು ದೂರು ನೀಡಿ ಪತ್ತೆ ಮಾಡಿ ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಆದರೆ ಘಟನೆಯ ಬಗ್ಗೆ ಪ್ರಭಾಕರ್ ಭಟ್ ಹಾಗೂ ಹರೀಶ್ ಪೂಂಜ ಕಾಂಗ್ರೆಸ್ ಮೇಲೆ ಆರೋಪ ಮಾಡಿದ್ದಾರೆ. ಚಪ್ಪಲಿ ಹಾರ ಹಾಕಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಪ್ರತಿಭಟನೆಯಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಹಾಗೂ ಕಾಂಗ್ರೆಸ್ ಮೇಲೆ ಆರೋಪ ಮಾಡಿದ್ದಾರೆ. ಆದರೆ ರಾಜ್ಯದಲ್ಲಿ ಇದೀಗ ಬಿಜೆಪಿ ಹಂಗಾಮಿ ಸರಕಾರ ಆಡಳಿತದಲ್ಲಿದೆ. ನಾಳೆ ನಮ್ಮ ಸರಕಾರ ಅಸ್ತಿತ್ವಕ್ಕೆ ಬರಬೇಕಷ್ಟೆ. ಆದರೆ ಕಾಂಗ್ರೆಸ್ ಮೇಲೆ ಆರೋಪ ಮಾಡುವವರಿಗೆ ಕನಿಷ್ಠ ಜ್ಞಾನವಿರಬೇಕು. ಈಗ ಬಸವರಾಜ ಬೊಮ್ಮಾಯಿಯವರೇ ಹಂಗಾಮಿ ಮುಖ್ಯಮಂತ್ರಿಯಾಗಿದ್ದಾರೆ. ಸುಳ್ಳು ಹೇಳುವಾಗಲೂ ಜನರು ನಂಬುವಂತಿರಬೇಕು ಎಂದರು.
ಪೊಲೀಸರಿಗೆ ದೂರು ನೀಡಿದ್ದು ಯಾರು ಎಂದು ಗೊತ್ತಿದ್ದರೂ ಅರುಣ್ ಪುತ್ತಿಲ ಅವರು ನೇರವಾಗಿ ಬಿಜೆಪಿ ಮೇಲೆ ಆರೋಪ ಮಾಡದೆ ನುಣುಚಿಕೊಳ್ಳುತ್ತಿದ್ದಾರೆ. ಕೂರ್ನಡ್ಕದಲ್ಲಿ ಹಿಂದು ಕಾರ್ಯಕರ್ತರ ಮೇಲೆ ಹಲ್ಲೆ, ಕಾವುನಲ್ಲಿ ಮುಸ್ಲಿಮರಿಂದ ಬ್ಯಾನರ್‍ಗೆ ಹಾನಿ ಮಾಡಿರುವುದಾಗಿ ಅರುಣ್ ಪುತ್ತಿಲ ಆರೋಪಿಸುತ್ತಾ ದಿಕ್ಕು ತಪ್ಪಿಸುತ್ತಿದ್ದಾರೆ. ಮುಸ್ಲಿಮರಿಗಾಗಲಿ, ಕಾಂಗ್ರೆಸ್‍ನವರಿಗಾಗಲಿ ಪುತ್ತಿಲ ಅವರ ಬ್ಯಾನರ್ ಹಾನಿ ಮಾಡುವ ಅವಶ್ಯಕತೆಯಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರೋಷನ್ ರೈ ಬನ್ನೂರು, ನಗರ ಕಾಂಗ್ರೆಸ್ ಉಪಾಧ್ಯಕ್ಷರಾದ ಮುಕೇಶ್ ಕೆಮ್ಮಿಂಜೆ, ಮಂಜುನಾಥ ಹಾಗೂ ಕಾರ್ಯದರ್ಶಿ ವಿಕ್ಟರ್ ಪಾಯಸ್ ಉಪಸ್ಥಿತರಿದ್ದರು.







