ಕರ್ನಾಟಕದ ಸಿಎಂ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಪಿಣರಾಯಿ ವಿಜಯನ್ ರನ್ನು ಆಹ್ವಾನಿಸದ ಕಾಂಗ್ರೆಸ್: LDF ಟೀಕೆ

ತಿರುವನಂತಪುರ: ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಆಹ್ವಾನಿಸದೇ ಇರುವುದಕ್ಕೆ ಕಾಂಗ್ರೆಸ್ ಅನ್ನು ಎಲ್‌ಡಿಎಫ್ ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ.ಇದು ಕಾಂಗ್ರೆಸ್ ನ ಅಪಕ್ವ ರಾಜಕಾರಣ ಹಾಗೂ ದೌರ್ಬಲ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಎಲ್‌ಡಿಎಫ್ ಹೇಳಿದೆ.
ಬಿಜೆಪಿಯ ಫ್ಯಾಸಿಸ್ಟ್ ರಾಜಕಾರಣದ ವಿರುದ್ಧ ದೇಶದಲ್ಲಿ ಜಾತ್ಯತೀತ ಪ್ರಜಾಸತ್ತಾತ್ಮಕ ಶಕ್ತಿಗಳನ್ನು ಒಟ್ಟಿಗೆ ತರಲು ತನಗೆ ಸಾಧ್ಯವಿಲ್ಲ ಎಂಬುದನ್ನು ಪಿಣರಾಯಿ ವಿಜಯನ್ ಅವರನ್ನು ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಆಹ್ವಾನಿಸದೇ ಇರುವ ಮೂಲಕ ಕಾಂಗ್ರೆಸ್ ಸಾಬೀತುಪಡಿಸಿದೆ ಎಂದು ಎಲ್‌ಡಿಎಫ್ ನ ಸಂಚಾಲಕ ಇ.ಪಿ. ಜಯರಾಜನ್ ಅವರು ಶುಕ್ರವಾರ ಹೇಳಿದ್ದಾರೆ.
ಈ ದೇಶದಲ್ಲಿ ಬಿಜೆಪಿ ವಿರುದ್ಧವಾಗಿ ಕಾಂಗ್ರೆಸ್ ಯಾವ ನಿಲುವು ತೆಗೆದುಕೊಳ್ಳಲಿದೆ ಎಂದು ಅವರು ಪ್ರಶ್ನಿಸಿದ್ದಾರೆ. ದೇಶದ ರಾಜಕಾರಣ ಹಾಗೂ ಅಭಿವೃದ್ಧಿಯ ಪರಿವೀಕ್ಷಣೆ, ಮೌಲ್ಯಮಾಪನ ಮಾಡುವಲ್ಲಿ ಕಾಂಗ್ರೆಸ್ ನಾಯಕತ್ವ ದುರ್ಬಲವಾಗಿದೆ ಎಂದು ಕೂಡ ಜಯರಾಜನ್ ಅವರು ಪ್ರತಿಪಾದಿಸಿದ್ದಾರೆ.





