ಉಡುಪಿ: ಕುಸ್ತಿಪಟುಗಳ ಮೇಲಿನ ಲೈಂಗಿಕ ದೌರ್ಜನ್ಯ ಖಂಡಿಸಿ ಪ್ರತಿಭಟನೆ
ಪ್ರಧಾನಿ, ಗೃಹ ಸಚಿವರಿಂದ ಸಂವಿಧಾನದ ಉಲ್ಲಂಘನೆ: ವಿಮಲಾ ಆರೋಪ

ಉಡುಪಿ: ದೇಶದ ಮಹಿಳೆಯರಿಗೆ ಘನತೆಯಿಂದ ಬದುಕುವ ಎಲ್ಲ ರೀತಿಯ ಅಧಿಕಾರವನ್ನು ಕೊಟ್ಟಿರುವ ಸಂವಿಧಾನದ ಉಲ್ಲಂಘನೆಯು ಕೇಂದ್ರ ಸರಕಾರದಿಂದಲೇ ನಡೆಯುತ್ತಿದೆ. ದೇಶದ ಪ್ರಧಾನ ಮಂತ್ರಿ, ಗೃಹ ಸಚಿವರಿಗೆ ಸಂವಿಧಾನದ ಬಗ್ಗೆ ಕಿಂಚಿತ್ತಾದರೂ ಗೌರವ ಇದ್ದರೆ ಧಮನ ಆಗುತ್ತಿರುವ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ರಕ್ಷಿಸುವ ಕೆಲಸ ಮಾಡಬೇಕು. ಮಹಿಳಾ ಕ್ರೀಡಾಪಟುಗಳ ಮೇಲೆ ಲೈಂಗಿಕ ಕಿರುಕುಳ ನೀಡಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಮತ್ತು ಬಿಜೆಪಿ ಹರಿಯಾಣ ಮಂತ್ರಿ ಸಂದೀಪ್ ಸಿಂಗ್ ತಕ್ಷಣವೇ ಬಂಧನ ಮಾಡಬೇಕು ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ವಿಮಲಾ ಕೆ.ಎಸ್. ಒತ್ತಾಯಿಸಿದ್ದಾರೆ.
ಮಹಿಳಾ ಕ್ರೀಡಾಪಟುಗಳ ಮೇಲೆ ನಡೆಯುತ್ತಿರುವ ಲೈಂಗಿಕ ಕಿರುಕುಳ ಹಾಗೂ ಹಿಂಸೆಯನ್ನು ಖಂಡಿಸಿ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಮತ್ತು ಬಿಜೆಪಿ ಹರಿಯಾಣ ಮಂತ್ರಿ ಸಂದೀಪ್ ಸಿಂಗ್ ವಿರುದ್ಧ ಕಠಿಣ ಕ್ರಮ ಜರಗಿಸುವಂತೆ ಆಗ್ರಹಿಸಿ ಅಖಿಲ ಭಾರತ ಪ್ರತಿಭಟನಾ ದಿನದ ಅಂಗವಾಗಿ ಸಿಐಟಿಯು ಉಡುಪಿ ಮತ್ತು ಬ್ರಹ್ಮಾವರ ಸಂಚಾಲನ ಸಮಿತಿಗಳು, ಜನವಾದಿ ಮಹಿಳಾ ಸಂಘಟನೆ ಉಡುಪಿ ತಾಲೂಕು ಸಮಿತಿ, ಕರ್ನಾಟಕ ಪ್ರಾಂತ ಕೃಷಿ ಕೂಲಿ ಕಾರ್ಮಿಕರ ಸಂಘ ಉಡುಪಿ ತಾಲೂಕು ಸಮಿತಿಯ ನೇತೃತ್ವದಲ್ಲಿ ಶುಕ್ರವಾರ ಉಡುಪಿ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ನಡೆದ ಪ್ರತಿಭಟನಾ ಪ್ರದರ್ಶನವನ್ನುದ್ದೇಶಿಸಿ ಅವರು ಮಾತನಾಡುತಿದ್ದರು
ಲೈಂಗಿಕ ಕಿರುಕುಳ ಆರೋಪ ಬಂದ ನಂತರವೂ ಸಂಸದ ಬ್ರಿಜ್ ಭೂಷಣ್ ಸಿಂಗ್ ದೇಹಭಾಷೆಯಲ್ಲಿನ ದರ್ಪ, ದುರಂಹಕಾರ ನೋಡಿದರೆ ಇವರು ಲೈಂಗಿಕ ದೌರ್ಜನ್ಯ ನಡೆಸಿರಬಹುದು ಎಂದು ಕಾಣುತ್ತದೆ. ಇವರಿಗೆ ಕನಿಷ್ಠ ಘನತೆ ಹಾಗೂ ತನ್ನ ಪದವಿ ಬಗ್ಗೆ ಗೌರವ ಇದ್ದರೆ ತಾವಾಗಿಯೇ ರಾಜೀನಾಮೆ ಕೊಡ ಬೇಕು. ಸರಕಾರ ಈ ಪ್ರಕರಣದ ಬಗ್ಗೆ ನಿಷ್ಪಕ್ಷಪಾತವಾಗಿ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಈವರೆಗೆ ರಾಜೀನಾಮೆ ನೀಡದ ಬ್ರಿಜ್ ಭೂಷಣ್‌ರನ್ನು ಪ್ರಧಾನ ಮಂತ್ರಿ, ಗೃಹ ಸಚಿವರು ಸಂಸದ್ ಸ್ಥಾನದಿಂದ ವಜಾಗೊಳಿಸಬೇಕಿತ್ತು. ಅದನ್ನು ಮಾಡುವ ಬದಲು ಪ್ರಧಾನಿ ಹಾಗೂ ಗೃಹ ಸಚಿವರು ಚುನಾವಣೆ ಘೋಷಣೆ ಆದ ದಿನದಿಂದ ಕರ್ನಾಟಕದಲ್ಲೇ ಠಿಕಾಣಿ ಹೂಡಿ ಊರು ಊರು ತಿರುಗಿದರು. ಅಲ್ಲಿ ಎಲ್ಲೂ ಈ ಪ್ರಕರಣದ ಬಗ್ಗೆ ಮಾತನಾಡಿಲ್ಲ ಎಂದು ಅವರು ಟೀಕಿಸಿದರು.
ದೇಶಕ್ಕೆ ಪದಕ ತಂದುಕೊಟ್ಟ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆದಿದ್ದರೂ ಪ್ರಧಾನಿ, ಗೃಹ ಸಚಿವರು, ಮಹಿಳಾ ಮತ್ತು ಕಲ್ಯಾಣ ಸಚಿವರು, ಅವರನ್ನು ತಿರುಗಿ ಕೂಡ ನೋಡಿಲ್ಲ. ಇವರ ಬೇಟಿ ಬಚಾವೂ ಕೇವಲ ಕರ್ಣಾನಂದಕ್ಕೆ ಹಾಗೂ ಜನರನ್ನು ಮರಳು ಮಾಡಲು ಮಾತ್ರ. ಈ ದೇಶದ ಹೆಣ್ಣು ಮಕ್ಕಳು, ಮಹಿಳೆಯರು, ಜನ ಸಾಮಾನ್ಯರ ಬಗ್ಗೆ ಕಳಕಳಿ, ಕಾಳಜಿ ಇವರಿಗೆ ಇಲ್ಲ ಎಂಬುದು ಇದರಿಂದ ಅರ್ಥ ಮಾಡಿಕೊಳ್ಳಬೇಕು ಎಂದರು.
ಪ್ರತಿಭಟನೆಯಲ್ಲಿ ಸಿಐಟಿಯು ಉಡುಪಿ ಜಿಲ್ಲಾಧ್ಯಕ್ಷ ಕೆ.ಶಂಕರ್, ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ್, ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಮುಖಂಡ ರಾದ ಶಶಿಧರ ಗೊಲ್ಲ, ಕವಿರಾಜ್, ಮಹಾಬಲ ವಡೇರಹೋಬಳಿ, ಶೇಖರ ಬಂಗೇರ, ವೆಂಕಟೇಶ್ ಕೋಣಿ, ಶೀಲಾವತಿ, ಸರೋಜ, ಉಮೇಶ್ ಕುಂದರ್, ನಳಿನಿ, ಬಲ್ಕಿಸ್ ಕುಂದಾಪುರ, ರಾಮ ಕರ್ಕಡ, ಅದಮಾರು ಶ್ರೀಪತಿ ಆಚಾರ್ಯ, ವಿಶ್ವನಾಥ ಮೊದಲಾದವರು ಉಪಸ್ಥಿತರಿದ್ದರು.