ಮಂಗಳೂರು | ಬಸ್ ಢಿಕ್ಕಿ: ರಸ್ತೆ ದಾಟುತ್ತಿದ್ದ ವ್ಯಕ್ತಿ ಮೃತ್ಯು

ಮಂಗಳೂರು: ನಗರದ ಅಳಪೆ ಗ್ಯಾಲರಿ ಅಪಾರ್ಟ್ಮೆಂಟ್ನ ಮುಂದಿನ ರಸ್ತೆಯನ್ನು ದಾಟುತ್ತಿದ್ದ ಸುಧಾಕರ ಶೆಟ್ಟಿ ಎಂಬವರಿಗೆ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಸಂಚಾರ ದಕ್ಷಿಣ ಪೊಲೀಸರು ತಿಳಿಸಿದ್ದಾರೆ.
ಮೇ 19ರ ಮುಂಜಾನೆ 5:30ಕ್ಕೆ ಪಂಪ್ವೆಲ್ ನಿಂದ ಪಡೀಲ್ ಕಡೆಗೆ ಹಾದು ಹೋಗಿರುವ ರಸ್ತೆಯನ್ನು ಸುಧಾಕರ ಶೆಟ್ಟಿ ದಾಟುತ್ತಿರುವಾಗ ಖಾಸಗಿ ಬಸ್ಸೊಂದು ಢಿಕ್ಕಿ ಹೊಡೆಯಿತು ಎನ್ನಲಾಗಿದೆ.
ಅಪಘಾತ ಎಸಗಿದ ಆರೋಪಿಯು ಸ್ಥಳದಿಂದ ಬಸ್ ಸಮೇತ ಪರಾರಿಯಾಗಿದ್ದು, ಸ್ಥಳೀಯರು ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿದ್ದರು. ಹೆಚ್ಚಿನ ಚಿಕಿತ್ಸೆಗೆ ಸುಧಾಕರ ಶೆಟ್ಟಿಯ ಪುತ್ರ ಸುಶ್ರಾಥ್ ಶೆಟ್ಟಿ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದರು. ಆದರೆ ಪರೀಕ್ಷಿಸಿದ ವೈದ್ಯರು ಬೆಳಗ್ಗೆ 7:15ಕ್ಕೆ ಸುಧಾಕರ ಶೆಟ್ಟಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಆರೋಪಿ ಬಸ್ ಚಾಲಕ ದಯಾನಂದನ ವಿರುದ್ಧ ಸುಶ್ರಾಥ್ ಶೆಟ್ಟಿ ನೀಡಿದ ದೂರಿನಂತೆ ಸಂಚಾರ ದಕ್ಷಿಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.





