ಕೋಟ್ಯಾಂತರ ಜನರ ಜೀವಿತಾವಧಿ ಕಸಿದುಕೊಂಡ ಕೋವಿಡ್ ಸೋಂಕು : ವಿಶ್ವಸಂಸ್ಥೆ ವರದಿ

ಜಿನೆವಾ, ಮೇ 19: ಕೋವಿಡ್-19 ಸಾಂಕ್ರಾಮಿಕದ ಆರಂಭಿಕ 2 ವರ್ಷಗಳಲ್ಲಿ ಕೋಟ್ಯಾಂತರ ಜನತೆ ಅಕಾಲಿಕವಾಗಿ ಸಾವನ್ನಪ್ಪಿದ್ದರಿಂದ ಸುಮಾರು 337 ದಶಲಕ್ಷದಷ್ಟು ಜೀವಿತಾವಧಿ ನಷ್ಟವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆಯ ವಾರ್ಷಿಕ ಅಂಕಿಅಂಶ ವರದಿಯು ಹೃದ್ರೋಗ, ಕ್ಯಾನ್ಸರ್ ಮತ್ತು ಮಧುಮೇಹದಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳಿಂದ ಬೆದರಿಕೆ ಹೆಚ್ಚುತ್ತಿರುವುದನ್ನು ತೋರಿಸಿದೆ. 2022ರವರೆಗಿನ ಅಂಕಿಅಂಶಗಳ ಆಧಾರದಲ್ಲಿ ಹೇಳುವುದಾದರೆ, ಸಾಂಕ್ರಾಮಿಕವು ಜಾಗತಿಕ ವಿನಾಶಕ್ಕೆ ಕಾರಣವಾಗಿದೆ ಮತ್ತು ಅಧಿಕೃತವಾಗಿ ಸುಮಾರು 7 ದಶಲಕ್ಷ ಜನರನ್ನು ಕೊಂದಿದೆ. ಆದರೆ ಸಾವನ್ನಪ್ಪಿದವರ ನೈಜ ಸಂಖ್ಯೆ 20 ದಶಲಕ್ಷದಷ್ಟಿರಬಹುದು ಎಂದು ವರದಿ ಹೇಳಿದೆ. ಮಿಲಿಯಾಂತರ ಜನರ ಜೀವಿತಾವಧಿಯನ್ನು ಕೊರೋನ ಸೋಂಕು ಹೇಗೆ ಹಠಾತ್ ಅಂತ್ಯಗೊಳಿಸಿದೆ ಎಂಬ ವಿವರ ಈ ವರದಿಯಲ್ಲಿದೆ.
ವಿಶ್ವ ಆರೋಗ್ಯ ಸಂಸ್ಥೆಯು 2020 ಮತ್ತು 2021ರಲ್ಲಿ 5.4 ದಶಲಕ್ಷ ಕೋವಿಡ್ ಸಾವುಗಳನ್ನು ಅಧಿಕೃತವಾಗಿ ದಾಖಲಿಸಿದ್ದರೆ, ವಿಶ್ವದಾದ್ಯಂತದ ಮಾಹಿತಿಯ ಪ್ರಕಾರ ಸುಮಾರು 14.9 ದಶಲಕ್ಷ ಜನತೆ ಈ ಅವಧಿಯಲ್ಲಿ ಕೋವಿಡ್ನಿಂದಾಗಿ ಮೃತಪಟ್ಟಿದ್ದಾರೆ. ಈ ಎರಡು ವರ್ಷ ಕೋವಿಡ್ ಸಾಂಕ್ರಾಮಿಕದ ಸಮಸ್ಯೆಯಿಂದ ಜಾಗತಿಕವಾಗಿ ಸುಮಾರು 336.8 ದಶಲಕ್ಷ ವರ್ಷಗಳಷ್ಟು ಜೀವಿತಾವಧಿ ನಷ್ಟವಾಗಿದೆ. ಇದು ಪ್ರತೀ ಹೆಚ್ಚುವರಿ ಸಾವಿಗೆ 22 ವರ್ಷಗಳ ಜೀವಿತಾವಧಿ ಕಳೆದುಕೊಂಡಂತೆ ಆಗುತ್ತದೆ' ಎಂದು ವಿಶ್ವ ಆರೋಗ್ಯಸಂಸ್ಥೆಯ ಅಂಕಿಅಂಶ ಮತ್ತು ವಿಶ್ಲೇಷಣೆ ವಿಭಾಗದ ಸಹಾಯಕ ಮುಖ್ಯಸ್ಥೆ ಸಮೀರಾ ಆಸ್ಮ ಹೇಳಿದ್ದಾರೆ.
ಹಲವು ವರ್ಷಗಳಿಂದ ಸುಧಾರಣೆಯ ಹಾದಿಯಲ್ಲಿದ್ದ ಹಲವು ಆರೋಗ್ಯ ಸಂಬಂಧಿ ಸೂಚಕಗಳನ್ನು ಹಳಿತಪ್ಪಿಸುವಲ್ಲಿ ಸಾಂಕ್ರಾಮಿಕ ಪ್ರಮುಖ ಪಾತ್ರ ವಹಿಸಿದೆ ಎಂದು ವರದಿ ಎಚ್ಚರಿಸಿದೆ. ಈ ಶತಮಾನದ ಆರಂಭದ ಎರಡು ದಶಕಗಳಲ್ಲಿ ಜಾಗತಿಕ ಮಟ್ಟದಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದ್ದು ತಾಯಿ ಮತ್ತು ಶಿಶುವಿನ ಸಾವಿನ ಪ್ರಮಾಣ ಅನುಕ್ರಮವಾಗಿ ಮೂರನೇ ಒಂದು ಮತ್ತು ಅರ್ಧದಷ್ಟು ಕಡಿಮೆಯಾಗಿತ್ತು. ಎಚ್ಐವಿ, ಕ್ಷಯ ಮತ್ತು ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳ ಪ್ರಮಾಣ, ಸಾಂಕ್ರಾಮಿಕವಲ್ಲದ ರೋಗಗಳಿಂದ ಅಕಾಲಿಕ ಮರಣದ ಪ್ರಕರಣವೂ ಗಮನಾರ್ಹವಾಗಿ ಕಡಿಮೆಯಾಗಿತ್ತು.
2000ನೇ ಇಸವಿಯಲ್ಲಿ ಜಾಗತಿಕ ಜೀವಿತಾವಧಿ 67 ವರ್ಷವಿದ್ದರೆ 2019ಕ್ಕೆ 73 ವರ್ಷಕ್ಕೆ ಏರಿಕೆಯಾಗಿತ್ತು. ಆದರೆ ಸಾಂಕ್ರಾಮಿಕದ ಆಘಾತ ಈ ಎಲ್ಲಾ ಸಾಧನೆಗಳನ್ನೂ ಮಣ್ಣುಗೂಡಿಸಿದೆ. ಉತ್ತಮ ಗುಣಮಟ್ಟದ ಆರೋಗ್ಯ ರಕ್ಷಣೆ, ದಿನನಿತ್ಯದ ಪ್ರತಿರಕ್ಷಣೆಗಳು ಮತ್ತು ಆರ್ಥಿಕ ರಕ್ಷಣೆಯ ಲಭ್ಯತೆಯಲ್ಲಿ ಇದ್ದ ಅಸಮಾನತೆ ಮತ್ತಷ್ಟು ವ್ಯಾಪಕಗೊಂಡಿತು ಮತ್ತು ಮಲೇರಿಯಾ ಮತ್ತು ಕ್ಷಯರೋಗದ ಪ್ರಕರಣ ಕ್ರಮೇಣ ಹೆಚ್ಚಲು ಕಾರಣವಾಯಿತು ಎಂದು ವರದಿ ಹೇಳಿದೆ.
ಜಾಗತಿಕ ಮಟ್ಟದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ಕಂಡುಬಂದರೂ, ಪ್ರತೀ ವರ್ಷ ಸಾಂಕ್ರಾಮಿಕವಲ್ಲದ ರೋಗಗಳಿಂದ ಸಾವನ್ನಪ್ಪುವವರ ಪ್ರಮಾಣ ಹೆಚ್ಚುತ್ತಾ ಹೋಗುತ್ತಿದೆ. 2000ನೇ ಇಸವಿಯಲ್ಲಿ ಜಾಗತಿಕವಾಗಿ ಸಾಂಕ್ರಾಮಿಕವಲ್ಲದ ರೋಗಗಳಿಂದ ಆದ ಸಾವಿನ ಪ್ರಮಾಣ ಸುಮಾರು 61% ಇದ್ದರೆ, 2019ರ ವೇಳೆ ಇದು 74%ಕ್ಕೆ ತಲುಪಿದೆ. ಈ ಪ್ರವೃತ್ತಿ ಹೀಗೆಯೇ ಮುಂದುವರಿದರೆ, ಶತಮಾನದ ಮಧ್ಯಭಾಗದ ವೇಳೆಗೆ 90 ದಶಲಕ್ಷ ವಾರ್ಷಿಕ ಸಾವುಗಳಲ್ಲಿ ಸುಮಾರು 86%ದಷ್ಟು ಸಾಂಕ್ರಾಮಿಕವಲ್ಲದ ರೋಗಗಳಿಂದ ಸಂಭವಿಸುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ಎಚ್ಚರಿಸಿದೆ.
`ವರದಿಯು ಸಾಂಕ್ರಾಮಿಕವಲ್ಲದ ರೋಗಗಳ ಅಪಾಯಗಳ ಬಗ್ಗೆ ಸ್ಪಷ್ಟ ಸಂದೇಶ ರವಾನಿಸಿದೆ. ಈ ಆವಿಷ್ಕಾರಗಳು ಸುಸ್ಥಿರ ಅಭಿವೃದ್ಧಿಯ ಗುರಿಗಳ ಕಡೆಗೆ ಹಿಂತಿರುಗಲು ಆರೋಗ್ಯ ಮತ್ತು ಆರೋಗ್ಯ ವ್ಯವಸ್ಥೆಗಳ ಹೂಡಿಕೆಯಲ್ಲಿ ಗಣನೀಯ ಹೆಚ್ಚಳದ ಅಗತ್ಯವನ್ನು ತೋರಿಸುತ್ತದೆ' ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಘೆಬ್ರಯೇಸಸ್ ಹೇಳಿದ್ದಾರೆ.