ಕೆ.ಜೆ.ಜಾರ್ಜ್ ಗೆ ಡಿಸಿಎಂ ಸ್ಥಾನ ನೀಡಲು ಕ್ರಿಶ್ಚಿಯನ್ ಫೋರಂ ಆಗ್ರಹ

ಬೆಂಗಳೂರು, ಮೇ 19: ‘ಕ್ರೈಸ್ತ ಸಮುದಾಯದಿಂದ ಬೆಂಗಳೂರಿನ ಸರ್ವಜ್ಞ ನಗರ ಕ್ಷೇತ್ರದಿಂದ ನೂತನವಾಗಿ ಆಯ್ಕೆಯಾಗಿರುವ ಏಕೈಕ ಶಾಸಕ ಕೆ.ಜೆ.ಜಾರ್ಜ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು’ ಎಂದು ಇಂಡಿಯನ್ ಕ್ರಿಶ್ಚಿಯನ್ ಯೂನಿಟಿ ಫೋರಂ ಆಗ್ರಹಿಸಿದೆ.
ಶುಕ್ರವಾರ ಫೋರಂನ ಅಧ್ಯಕ್ಷ ಅಂತೋಣಿ ವಿಕ್ರಮ್ ಪತ್ರಿಕಾ ಪ್ರಕಟಣೆ ನೀಡಿದ್ದು, ‘ಕ್ರೈಸ್ತ ಸಮುದಾಯದ ಪರವಾಗಿ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಅಭಿನಂದಿಸಿದ್ದಾರೆ. ಹೊಸ ಸರಕಾರವನ್ನು ಪರಿಣಾಮಕಾರಿಯಾಗಿ ನಡೆಸಲಿ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
‘ಹಿಂದಿನ ಬಿಜೆಪಿ ಸರಕಾರವು ಜಾರಿಗೆ ತಂದ ಮತಾಂತರ ನಿಷೇಧ ಕಾಯ್ದೆ ಹೆಸರಿನಲ್ಲಿ ಕ್ರೈಸ್ತ ಸಮುದಾಯದ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಕಿರುಕುಳ ನೀಡಲಾಗುತ್ತಿದೆ. ಹೀಗಾಗಿ ಸಂವಿಧಾನ ವಿರೋಧಿ ಕಾಯ್ದೆಯನ್ನು ಸರಕಾರ ಕೂಡಲೇ ಹಿಂಪಡೆಯಬೇಕು. ಕ್ರೈಸ್ತ ಸಮುದಾಯ ಭವನ ನಿರ್ಮಾಣಕ್ಕೆ ಬೆಂಗಳೂರಿನಲ್ಲಿ ಭೂಮಿ ನೀಡಬೇಕು. ಅಲ್ಲದೆ, ಸಮುದಾಯದ ಶೈಕ್ಷಣಿಕ ಉನ್ನತಿಗೆ ಆದ್ಯತೆ ನೀಡಬೇಕು ಎಂದು ಅಂತೋಣಿ ವಿಕ್ರಮ್ ಒತ್ತಾಯಿಸಿದ್ದಾರೆ.