ಮಂಗಳೂರು: ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ; ದೂರು

ಮಂಗಳೂರು: ಬ್ಯಾಂಕ್ ಖಾತೆದಾರನಿಗೆ ತಿಳಿಯದೆ ಖಾಸಗಿ ಸಂಸ್ಥೆಯೊಂದಕ್ಕೆ ಹಣ ವರ್ಗಾವಣೆಯಾದ ಬಗ್ಗೆ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೇ 6ರಂದು ಖಾತೆದಾರ ವ್ಯಕ್ತಿಯು ತನ್ನ ಬ್ಯಾಂಕ್ ಸ್ಟೇಟ್ಮೆಂಟ್ ನೋಡಿದಾಗ 45,657 ರೂ. ಖಾತೆಯಿಂದ ಕಡಿತಗೊಂಡಿರುವುದು ತಿಳಿದು ಬಂದಿದೆ. ತಕ್ಷಣ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ಫಿರ್ಯಾದಿಯ ಗಮನಕ್ಕೆ ಬಾರದೆ ಬ್ಯಾಂಕ್ ಖಾತೆಯಿಂದ ಎ.8ರಂದು ಫೇವರಿಂಗ್ ಬುಕ್ಕಿಂಗ್.ಕಾಮ್ ಎಂಬಲ್ಲಿಗೆ ಹಣ ವರ್ಗಾವಣೆಯಾಗಿರುವುದು ಕಂಡುಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಸುಲಭದಲ್ಲಿ ಹೆಚ್ಚು ಹಣ ಗಳಿಕೆ ಮಾಡುವ ಆಸೆಗೆ ಜೋತುಬಿದ್ದ ವ್ಯಕ್ತಿಯೊಬ್ಬರು ಲಕ್ಷಾಂತರ ರೂ. ಕಳಕೊಂಡ ಘಟನೆ ನಡೆದಿರುವುದಾಗಿ ವರದಿಯಾಗಿದೆ.
ಇನ್ಸ್ಟಾಗ್ರಾಮ್ ಮೂಲಕ ದಿನಕ್ಕೆ 1500ದಿಂದ 3 ಸಾವಿರ ರೂ. ಹಣವನ್ನು ಗಳಿಸಬಹುದು ಎಂಬ ಪೋಸ್ಟ್ ಗಮನಿಸಿದ ಫಿರ್ಯಾದಿದಾರರು ಅದರತಯ್ತ ಆಸಕ್ತಿ ವಹಿಸಿದರು. ವಾಟ್ಸ್ಆ್ಯಪ್ನಲ್ಲಿ ಟೆಲಿಗ್ರಾಮ್ ಗ್ರೂಪ್ಗೆ ಸೇರಿಸಿದ ಬಗ್ಗೆ ಮೆಸೇಜ್ ಕಳುಹಿಸಿದ ವಂಚಕರು ಟಾಸ್ಕ್ ಕಂಪ್ಲೀಟ್ ಮಾಡಲು ಸೂಚಿಸಿದರು. ಅದರಂತೆ ಹಂತಹಂತವಾಗಿ ಟಾಸ್ಕ್ ಮುಗಿಸಿದ ಬಳಿಕ ಫಿರ್ಯಾದಿದಾರರ ಖಾತೆಯಿಂದ 1,81,500 ರೂ. ಬೇರೆ ಖಾತೆಗೆ ವರ್ಗಾವಣೆಯಾಗಿರುವುದಾಗಿ ದೂರು ನೀಡಲಾಗಿದೆ.