ಮುಸ್ಲಿಮರಿಗೆ ತುಷ್ಟೀಕರಣ ಬೇಡ, ನ್ಯಾಯ ಬೇಕು: ಯು.ನಿಸಾರ್ ಅಹ್ಮದ್

ಬೆಂಗಳೂರು, ಮೇ 19: ಮುಸ್ಲಿಮ್ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ನೂತನ ರಾಜ್ಯ ಸರಕಾರವು ಅಲ್ಪಾವಧಿ ಹಾಗೂ ದೀರ್ಘಾವಧಿ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ. ಮುಸ್ಲಿಮರಿಗೆ ತುಷ್ಟೀಕರಣ ಬೇಡ, ನಮ್ಮ ಹಕ್ಕನ್ನು ನಮಗೆ ನೀಡಿ ಎಂದಷ್ಟೇ ನಾವು ಕೇಳುತ್ತಿದ್ದೇವೆ. ನಮಗೆ ನ್ಯಾಯಬೇಕಾಗಿದೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಯು.ನಿಸಾರ್ ಅಹ್ಮದ್ ಹೇಳಿದ್ದಾರೆ.
ಮುಸ್ಲಿಮರ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ನೂತನ ಕಾಂಗ್ರೆಸ್ ಸರಕಾರ ಕೈಗೊಳ್ಳಬೇಕಾದ ಕ್ರಮಗಳ ಕುರಿತು ‘ವಾರ್ತಾಭಾರತಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.
ಈ ಚುನಾವಣೆಯಲ್ಲಿ ಮುಸ್ಲಿಮರು ವಿವೇಚನೆಯಿಂದ ಮತದಾನ ಮಾಡಿದ್ದರಿಂದ ಜಾತ್ಯತೀತ ಪಕ್ಷದ ಸರಕಾರ ಅಧಿಕಾರಕ್ಕೆ ಬಂದಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಎಲ್ಲರಿಗೂ ನ್ಯಾಯ ಕೊಡುವ ಭರವಸೆಯನ್ನು ಕಾಂಗ್ರೆಸ್ ನೀಡಿದೆ. ನೂತನ ಸರಕಾರವು ಆದ್ಯತೆ ಮೇರೆಗೆ ಹಿಂದಿನ ಸರಕಾರದಲ್ಲಿ ಆಗಿರುವ ತಪ್ಪು ನಿರ್ಧಾರಗಳನ್ನು ಸರಿಪಡಿಸಬೇಕು. ಪ್ರವರ್ಗ 2 ‘ಬಿ’ ಅಡಿಯಲ್ಲಿ ಮುಸ್ಲಿಮರಿಗೆ ನೀಡಲಾಗುತ್ತಿದ್ದ ಮೀಸಲಾತಿ ರದ್ದುಪಡಿಸಿರುವುದು, ಶೈಕ್ಷಣಿಕ ಸಂಸ್ಥೆಗಳಲ್ಲಿನ ಹಿಜಾಬ್ ಮೇಲಿನ ನಿರ್ಬಂಧವನ್ನು ಹಿಂತೆಗೆದುಕೊಳ್ಳಬೇಕು ಎಂದು ನಿಸಾರ್ ಅಹ್ಮದ್ ಆಗ್ರಹಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸೂಕ್ತ ತಿದ್ದುಪಡಿ ತರಬೇಕು, ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಇದ್ದಂತಹ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಪುನಃಶ್ಚೇತನಗೊಳಿಸಿ ಹೆಚ್ಚಿನ ಶಕ್ತಿ ನೀಡಬೇಕು. ಸುಳ್ಳು ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿರುವ ಅಮಾಯಕರನ್ನು ರಕ್ಷಣೆ ಮಾಡಲು ಸರಕಾರ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಅವರು ಒತ್ತಾಯಿಸಿದರು.
ರಾಜ್ಯ ಅಲ್ಪಸಂಖ್ಯಾತರ ಆಯೋಗ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ವಕ್ಫ್ ಬೋರ್ಡ್ ಹಾಗೂ ಹಜ್ ಸಮಿತಿಯಲ್ಲಿ ರಾಜಕಾರಣಿಗಳನ್ನು ಅಧ್ಯಕ್ಷ, ಸದಸ್ಯರನ್ನಾಗಿ ಮಾಡುವುದರಿಂದ ಸಮುದಾಯಕ್ಕೆ ಯಾವುದೇ ಪ್ರಯೋಜನವಿಲ್ಲ. ಅಲ್ಲಿ ಅನುಭವಿಗಳು, ವೃತ್ತಿಪರರು, ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ನೇಮಿಸಿದರೆ ಸಮುದಾಯಕ್ಕೆ ಪ್ರಯೋಜನವಾಗುತ್ತದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಅತೀ ಹೆಚ್ಚು ಮಾನವ ಹಕ್ಕುಗಳ ಉಲ್ಲಂಘನೆಯಾಗುವುದು ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದವರ ಪ್ರಕರಣಗಳಲ್ಲಿ. ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಅಧ್ಯಕ್ಷರು ಅಥವಾ ಸದಸ್ಯರನ್ನಾಗಿ ಮುಸ್ಲಿಮ್ ಸಮುದಾಯದ ದಕ್ಷ ಕಾನೂನು ಅಧಿಕಾರಿ, ಐಎಎಸ್ ಅಥವಾ ಐಪಿಎಸ್ ಅಧಿಕಾರಿಯನ್ನು ನೇಮಿಸಬೇಕು. ರಾಜ್ಯ ಮಾಹಿತಿ ಆಯೋಗ ಹಾಗೂ ರಾಜ್ಯ ಲೋಕಸೇವಾ ಆಯೋ ಗದಲ್ಲಿಯೂ ಮುಸ್ಲಿಮರಿಗೆ ಪ್ರಾತಿನಿಧ್ಯ ನೀಡಬೇಕು ಎಂದು ಅವರು ಕೋರಿದರು.
ಮುಸ್ಲಿಮರಿಗೆ ಜಾತಿ ಪ್ರಮಾಣ ಪತ್ರ ನೀಡಲು ವಿಳಂಬ ಮಾಡದಂತೆ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್‌ಗಳಿಗೆ ಸ್ಪಷ್ಟ ಸೂಚನೆ ನೀಡಬೇಕು. ಉದ್ದೇಶಪೂರ್ವಕವಾಗಿ ವಿಳಂಬ ಮಾಡುವಂತಹ ಅಧಿಕಾರಿಗಳನ್ನು ಅಮಾನತು ಮಾಡುವುದಾಗಿ ಎಚ್ಚರಿಕೆ ನೀಡಬೇಕು ಎಂದು ನಿಸಾರ್ ಅಹ್ಮದ್ ಹೇಳಿದರು.
ಕೇಂದ್ರ ಸರಕಾರದ ಉದ್ಯೋಗಗಳನ್ನು ಪಡೆಯಲು ಅಗತ್ಯವಿರುವ ಒಬಿಸಿ ಪ್ರಮಾಣ ಪತ್ರ ನೀಡುವಲ್ಲಿ ವಿಳಂಬ ಮಾಡುವುದರಿಂದ ಮುಸ್ಲಿಮರು ಉದ್ಯೋಗಾವಕಾಶಗಳಿಂದ ವಂಚಿತರಾಗುತ್ತಾರೆ. ಅರ್ಹ ಅಭ್ಯರ್ಥಿಗಳಿಗೆ ಪರಿಶೀಲನೆ ಮಾಡಿ ಒಬಿಸಿ ಪ್ರಮಾಣ ಪತ್ರ ನೀಡಬೇಕು. ಇಂತಹ ಪ್ರಕರಣಗಳಲ್ಲಿ ಉದಾಸೀನತೆ ತೋರದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ತಾಕೀತು ಮಾಡಬೇಕು ಎಂದು ನಿಸಾರ್ ಅಹ್ಮದ್ ತಿಳಿಸಿದರು.
ರಾಜ್ಯದಲ್ಲಿನ ಬಹುತೇಕ ವಕ್ಫ್ ಆಸ್ತಿಗಳ ಮಾಲಕತ್ವ ವಕ್ಫ್ ಬೋರ್ಡ್ ಹೆಸರಿನಲ್ಲಿ ಇಲ್ಲ. ಇದರಿಂದಾಗಿ, ವಕ್ಫ್ ಆಸ್ತಿಗಳ ದುರ್ಬಳಕೆ ಆಗುತ್ತಿದೆ. ವಕ್ಫ್ ಆಸ್ತಿಗಳನ್ನು ಸಂರಕ್ಷಿಸಲು ಕಂದಾಯ ಇಲಾಖೆಯು ಗೆಜೆಟೆಡ್ ವಕ್ಫ್ ಆಸ್ತಿಗಳ ಮಾಲಕತ್ವದ ಹಕ್ಕನ್ನು ವಕ್ಫ್ ಬೋರ್ಡ್ ಹೆಸರಿನಲ್ಲಿ ನೋಂದಾಯಿಸಬೇಕು. ಒತ್ತುವರಿಯಾಗಿರುವ ವಕ್ಫ್ ಆಸ್ತಿಗಳನ್ನು ತೆರವು ಮಾಡಲು ವಕ್ಫ್ ಬೋರ್ಡ್‌ನೊಂದಿಗೆ ಪೊಲೀಸರು ಹಾಗೂ ಕಂದಾಯ ಇಲಾಖೆ ಕೈ ಜೋಡಿಸುವಂತೆ ಸೂಚನೆ ನೀಡಬೇಕು ಎಂದು ಅವರು ಹೇಳಿದರು.
ಮುಸ್ಲಿಮರ ಒಡೆತನದ ಸಂಸ್ಥೆಗಳಿಗೆ ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಕ್ಕಾಗಿ ಸರಕಾರಿ ಭೂಮಿ ಮಂಜೂರು ಮಾಡುವ ಕೆಲಸ ಮಾಡಬೇಕು. ಹಜ್ ಭವನವನ್ನು ಹಜ್ ಯಾತ್ರೆ ಹೊರತುಪಡಿಸಿ ಉಳಿದ ದಿನಗಳಲ್ಲಿ ಯುವಕರಿಗೆ ಯುಪಿಎಸ್ಸಿ, ಕೆಎಎಸ್, ಎಸ್.ಎಸ್.ಸಿ, ಎನ್.ಡಿ.ಎ, ಕ್ಲಾಟ್, ನೀಟ್ ಮತ್ತಿತರ ಪರೀಕ್ಷೆಗಳಿಗಾಗಿ ತರಬೇತಿ(ಕೋಚಿಂಗ್) ನೀಡಲು ಬಳಸಬೇಕು. ಇದರಲ್ಲಿಯೂ ರಾಜಕಾರಣಿಗಳಿಗೆ ಅವಕಾಶ ನೀಡದೆ, ನಿವೃತ್ತ ಕುಲಪತಿಗಳು, ಪ್ರಾಧ್ಯಾಫಕರು, ಆಡಳಿತಾಧಿಕಾರಿಗಳನ್ನು ಒಳಗೊಂಡ ಸಮಿತಿ ರಚನೆ ಮಾಡಬೇಕು ಎಂದು ನಿಸಾರ್ ಅಹ್ಮದ್ ಹೇಳಿದರು.
ಸರಕಾರಿ ಇಲಾಖೆಗಳಲ್ಲಿನ ನೇಮಕಾತಿ;
ಪೊಲೀಸ್ ಇಲಾಖೆ, ಕಂದಾಯ ಇಲ್ಲಖೆ ಮುಂತಾದ ಪ್ರಮುಖ ಇಲಾಖೆಗಳಲ್ಲಿನ ಪ್ರಮುಖ ಹುದ್ದೆಗಳಿಗೆ ಅಧಿಕಾರಿಗಳನ್ನು ನೇಮಿಸುವಾಗ ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಗಳಿಗೆ ಪ್ರಾಶಸ್ತ್ಯ ನೀಡಬೇಕು. ಇದರಿಂದಾಗಿ, ಈ ವರ್ಗಗಳಲ್ಲಿ ಆಶಾವಾದ ಬೆಳೆಯುತ್ತದೆ ಎಂದು ನಿಸಾರ್ ಅಹ್ಮದ್ ಅಭಿಪ್ರಾಯಪಟ್ಟರು. ಮುಸ್ಲಿಮರನ್ನು ಕೇವಲ ಅಲ್ಪಸಂಖ್ಯಾತರ ಆಯೋಗ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಹಾಗೂ ವಕ್ಫ್ ಬೋರ್ಡ್ ಅಷ್ಟಕ್ಕೆ ಸೀಮಿತಗೊಳಿಸಲಾಗುತ್ತಿದೆ. ಸರಕಾರದ ಸುಮಾರು 83 ನಿಗಮ, ಮಂಡಳಿಗಳಿದ್ದು ಅವುಗಳಿಗೆ ಅಧ್ಯಕ್ಷ, ಸದಸ್ಯರನ್ನು ನೇಮಕ ಮಾಡುವಾಗ ಮುಸ್ಲಿಮರನ್ನು ಪರಿಗಣಿಸಬೇಕು ಎಂದು ನಿಸಾರ್ ಅಹ್ಮದ್ ಹೇಳಿದರು.
ಉದಾಹರಣೆಗೆ ರಾಜ್ಯ ಗೃಹ ಮಂಡಳಿ, ಕೊಳಗೇರಿ ಅಭಿವೃದ್ಧಿ ಮಂಡಳಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬಿಎಂಆರ್‌ಡಿಎ, ಕೆಐಎಡಿಬಿ, ಕೆಎಸ್‌ಐಐಡಿಸಿ, ಕೆಎಸ್‌ಟಿಡಿಸಿ, ಕೆಎಸ್‌ಎಫ್‌ಸಿ, ಎಂಎಂಎಲ್, ಬಿಎಂಟಿಸಿ, ಆಹಾರ ನಾಗರಿಕ ಸರಬರಾಜು ನಿಗಮ, ಅರಣ್ಯ ಅಭಿವೃದ್ಧಿ ನಿಗಮ, ಮಾಲಿನ್ಯ ನಿಯಂತ್ರಣ ಮಂಡಳಿ, ಕೆಪಿಟಿಸಿಎಲ್ ಇತ್ಯಾದಿ ಎಂದು ಅವರು ಹೇಳಿದರು.
''2013ರ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷವು ಮುಸ್ಲಿಮರಿಗೆ ವಿಶೇಷ ಉಪಯೋಜನೆ(ಎಸ್‌ಸಿಪಿ) ಜಾರಿಗೆ ತಂದು ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ ಹಂಚಿಕೆ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ, ಐದು ವರ್ಷಗಳ ಆಡಳಿತದಲ್ಲಿ ಅದನ್ನು ಜಾರಿ ಮಾಡಿಲ್ಲ. ಈಗ ಮತ್ತೊಮ್ಮೆ ಸರಕಾರಕ್ಕೆ ಅವಕಾಶವಿದೆ. ಈ ಹಿಂದೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲಿ. ಇಲ್ಲದಿದ್ದಲ್ಲಿ, ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಆಧರಿಸಿ ಮುಸ್ಲಿಮರು ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ''
-ಯು.ನಿಸಾರ್ ಅಹ್ಮದ್, ನಿವೃತ್ತ ಐಪಿಎಸ್ ಅಧಿಕಾರಿ