ಜಪಾನ್‌ನ ಹಿರೋಷಿಮಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ

ಹೊಸದಿಲ್ಲಿ: ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜಪಾನ್‌ನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹಿರೋಷಿಮಾದಲ್ಲಿ ಮಹಾತ್ಮ ಗಾಂಧಿಯವರ ಪುತ್ಥಳಿಯನ್ನು ಅನಾವರಣಗೊಳಿಸಿದರು.
ಮಹಾತ್ಮ ಗಾಂಧಿಯವರ ಪುತ್ಥಳಿಗೆ ನಮಿಸುತ್ತಿರುವ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ಮಹಾತ್ಮ ಗಾಂಧಿಯವರ ಪ್ರತಿಮೆಯು ಅಹಿಂಸೆಯ ಕಲ್ಪನೆಯನ್ನು ಮುಂದಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಿದ್ದಾರೆ.
"ಹಿರೋಷಿಮಾದಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಹಿರೋಷಿಮಾದಲ್ಲಿನ ಈ ಪ್ರತಿಮೆಯು ಜಗತ್ತಿಗೆ ಬಹಳ ಮುಖ್ಯವಾದ ಸಂದೇಶವನ್ನು ನೀಡುತ್ತದೆ. ಗಾಂಧಿಯವರ ಶಾಂತಿ ಮತ್ತು ಸೌಹಾರ್ದತೆಯ ಆದರ್ಶಗಳು ಜಾಗತಿಕವಾಗಿ ಪ್ರತಿಧ್ವನಿಸುತ್ತವೆ ಹಾಗೂ ಲಕ್ಷಾಂತರ ಜನರಿಗೆ ಶಕ್ತಿಯನ್ನು ನೀಡುತ್ತವೆ" ಎಂದು ಪ್ರಧಾನಿ ಮೋದಿ ಜಪಾನ್‌ನಲ್ಲಿ ಟ್ವೀಟ್ ಮಾಡಿದ್ದಾರೆ.
ಮಹಾತ್ಮಾ ಗಾಂಧಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, 'ಹಿರೋಷಿಮಾ' ಎಂಬ ಪದವನ್ನು ಕೇಳಿದರೆ ಇಂದಿಗೂ ಜಗತ್ತು ಭಯಭೀತವಾಗುತ್ತಿದೆ ಎಂದು ಸುಮಾರು 140,000 ಜನರನ್ನು ಬಲಿತೆಗೆದುಕೊಂಡ ಎರಡನೇ ಮಹಾಯುದ್ಧದ ಸಮಯದಲ್ಲಿ ಅಮೆರಿಕ ನಡೆಸಿದ ಪರಮಾಣು ದಾಳಿಯನ್ನು ಉಲ್ಲೇಖಿಸಿ ಹೇಳಿದರು.
"ಜಿ 7 ಶೃಂಗಸಭೆಗಾಗಿ ನಾನು ಜಪಾನ್‌ಗೆ ಭೇಟಿ ನೀಡಿದಾಗ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಅನಾವರಣಗೊಳಿಸುವ ಅವಕಾಶ ನನಗೆ ಸಿಕ್ಕಿತು. ಹಿರೋಷಿಮಾದಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆಯು ಅಹಿಂಸೆಯ ಕಲ್ಪನೆಯನ್ನು ಮುಂದಕ್ಕೆ ಕೊಂಡೊಯ್ಯುತ್ತದೆ" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ANI ತಿಳಿಸಿದೆ.
#WATCH | Prime Minister Narendra Modi unveils a bust of Mahatma Gandhi in Hiroshima, Japan.#G7HiroshimaSummit pic.twitter.com/N6lsN5hh66
— ANI (@ANI) May 19, 2023