ಅಮೆರಿಕಾ ಆರ್ಥಿಕ ದಿಗ್ಬಂಧನಗಳಿಗೆ ಪ್ರತೀಕಾರ: ಬರಾಕ್ ಒಬಾಮಾ ಸೇರಿದಂತೆ 500 ಅಮೆರಿಕನ್ನರಿಗೆ ರಷ್ಯಾ ಪ್ರವೇಶ ನಿಷೇಧ

ಮಾಸ್ಕೋ: ಅಮೆರಿಕಾ ವಿಧಿಸಿರುವ ಆರ್ಥಿಕ ದಿಗ್ಬಂಧನಗಳಿಗೆ ಪ್ರತೀಕಾರವಾಗಿ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಸೇರಿದಂತೆ 500 ಅಮೆರಿಕನ್ನರಿಗೆ ರಷ್ಯಾ ಪ್ರವೇಶಿದಂತೆ ಶುಕ್ರವಾರ ರಷ್ಯಾ ದೇಶವು ನಿಷೇಧ ಹೇರಿದೆ ಎಂದು ndtv.com ವರದಿ ಮಾಡಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ವಿದೇಶಾಂಗ ಸಚಿವಾಲಯವು, "ಬೈಡನ್ ಆಡಳಿತದಿಂದ ನಿಯಮಿತವಾಗಿ ಹೇರಲಾಗಿರುವ ರಷ್ಯಾ ವಿರೋಧಿ ಆರ್ಥಿಕ ದಿಗ್ಬಂಧನಗಳಿಗೆ ಪ್ರತಿಯಾಗಿ 500 ಅಮೆರಿಕನ್ನರಿಗೆ ರಷ್ಯಾ ಪ್ರವೇಶಿಸದಂತೆ ನಿಷೇಧ ಹೇಲಾಗಿದೆ" ಎಂದು ಹೇಳಿದ್ದು, ಈ ಪೈಕಿ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಕೂಡಾ ಸೇರಿದ್ದಾರೆ ಎಂದು ತಿಳಿಸಿದೆ.
ಉಕ್ರೇನ್ ವಿರುದ್ಧದ ಯುದ್ಧಾಪರಾಧಕ್ಕೆ ಕಡಿವಾಣ ಹಾಕಲು ಶುಕ್ರವಾರ ಅಮೆರಿಕಾವು ಇನ್ನೂ ನೂರಾರು ರಷ್ಯಾ ಕಂಪನಿಗಳು ಹಾಗೂ ರಷ್ಯಾ ನಾಗರಿಕರ ವಿರುದ್ಧ ಆರ್ಥಿಕ ದಿಗ್ಬಂಧನಗಳನ್ನು ವಿಧಿಸುವ ಮೂಲಕ ರಷ್ಯಾದ ಆರ್ಥಿಕತೆಗೆ ಹೊಡೆತ ನೀಡುವ ಪ್ರಯತ್ನ ಮಾಡಿತ್ತು.
ಈ ಕ್ರಮಕ್ಕೆ ಉಗ್ರವಾಗಿ ಪ್ರತಿಕ್ರಿಯಿಸಿರುವ ರಷ್ಯಾ ವಿದೇಶಾಂಗ ಸಚಿವಾಲಯವು, "ರಷ್ಯಾ ವಿರುದ್ಧ ನಡೆಯುವ ಯಾವುದೇ ಶರಣಾಗತಗೊಳಿಸುವ ಪ್ರಯತ್ನವೂ ಪ್ರತ್ಯುತ್ತರವಿಲ್ಲದೆ ಕೊನೆಯಾಗಿಲ್ಲ ಎಂಬ ಸಂಗತಿಯನ್ನು ಅಮೆರಿಕಾ ಬಹಳ ಹಿಂದೆಯೇ ಅರಿತುಕೊಳ್ಳಬೇಕಿತ್ತು" ಎಂದು ಆಕ್ರೋಶ ವ್ಯಕ್ತಪಡಿಸಿದೆ.