ವಿಶೇಷ ಅಂಚೆ ಲಗೋಟೆ ಸಂಶೋಧನೆಗೆ ಪ್ರೇರಕ: ಕೃಷ್ಣರಾಜ ಭಟ್

ಉಡುಪಿ, ಮೇ 20: ಭಾರತೀಯ ಅಂಚೆ ಇಲಾಖೆ ಉಡುಪಿ ವಿಭಾಗದ ವತಿಯಿಂದ ‘ಬಾಳಿನ ಗಿಡ’ ಖ್ಯಾತಿಯ ಸಾಹಿತಿ ಮಾರ್ಪಳ್ಳಿ ಹರಿದಾಸ ರಾವ್ ಸ್ಮರಣಾರ್ಥ ವಿಶೇಷ ಅಂಚೆ ಲಕೋಟೆ ಬಿಡುಗಡೆ ಕಾರ್ಯಕ್ರಮವು ಉಡುಪಿ ಪ್ರಧಾನ ಅಂಚೆ ಕಚೇರಿಯಲ್ಲಿ ಶನಿವಾರ ಜರಗಿತು.
ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸಿದ ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕ ಕೃಷ್ಣರಾಜ ವಿಠಲ ಭಟ್ ಮಾತನಾಡಿ, ವಿಶೇಷ ಅಂಚೆ ಲಕೋಟೆ ಭಾರತೀಯ ಸಂಸ್ಕೃತಿಯನ್ನು ಜನರಿಗೆ ಪರಿಚಯಿಸಿ, ಉಳಿಸಿ ಬೆಳಿಸಿಕೊಂಡು ಮುಂದಿನ ಪೀಳಿಗೆ ವರ್ಗಾಯಿಸುವ ದೊಡ್ಡ ಜವಾಬ್ದಾರಿಯತ ಕೆಲಸವನ್ನು ಮಾಡುತ್ತದೆ ಎಂದು ಹೇಳಿದರು.
ಈ ಲಗೋಟೆ ದೇಶದಾದ್ಯಂತ ಅಂಚೆ ಬ್ಯೂರೋಗಳಿಗೆ ತಲುಪಿ ಅಲ್ಲಿಂದ ಅಂಚೆ ಚೀಟಿ ಸಂಗ್ರಹಕರ ಕೈ ಸೇರಿ ಜಗತ್ತಿನಾದ್ಯಂತ ನಡೆಯುವ ಅಂಚೆಚೇಟಿ ಪ್ರದರ್ಶನಗಳಲ್ಲಿ ಜನರ, ಮಕ್ಕಳ ಹಾಗೂ ಸಂಶೋಧಕರ ಗಮನ ಸೆಳೆಯಲಿದೆ. ಅಲ್ಲದೆ ನಮ್ಮ ಸಂಸ್ಕೃತಿ ಮತ್ತು ಮಹನೀಯರ ಪರಿಚಯ ಮಾಡಿ ಕೊಳ್ಳುತ್ತದೆ. ಇಂತಹ ಮಹನೀಯರು ಇಂದಿಗೂ ಜನಮಾನಸದಲ್ಲಿ ಪ್ರೇಕರ ಶಕ್ತಿಯಾಗಿ ನೆಲೆಯೂರಿ ನಿಲ್ಲಲು ಈ ಲಗೋಟೆ ನೆರವಾಗುತ್ತದೆ. ಇವರ ಬಗ್ಗೆ ಇನ್ನಷ್ಟು ಸಂಶೋಧಕ ಕೃತಿಗಳು ಹೊರಬರಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.
ಲಕೋಟೆಯ ಮೈ ಸ್ಟ್ಯಾಂಪ್‌ನ್ನು ಹರಿದಾಸ ರಾವ್ ಅವರ ಮಗ ಡಾ.ರಾಮ ಕಾಂತ ರಾವ್ ಬಿಡುಗಡೆಗೊಳಿಸಿದರು. ಮಾರ್ಪಳ್ಳಿ ನಾಗಪ್ಪಯ್ಯ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾಜಿ ನಿರ್ದೇಶಕ ಎಂ.ಆರ್.ವಾಸುದೇವ, ಲೇಖಕಿ ಡಾ.ಸರ್ವಮಂಗಲ ಪಿ.ಆರ್., ಕವಯತ್ರಿ ವಿಜಯಲಕ್ಷ್ಮೀ ನಂದಳಿಕೆ ಮುಖ್ಯ ಅತಿಥಿಗಳಾಗಿದ್ದರು.
ಮುಖ್ಯ ಅಂಚೆಪಾಲಕ ಗುರುಪ್ರಸಾದ್ ಸ್ವಾಗತಿಸಿದರು. ಸಹಾಯಕ ಅಂಚೆ ಅಧೀಕ್ಷಕ ವಸಂತ ವಂದಿಸಿದರು. ಉಡುಪಿ ಅಂಚೆ ವಿಭಾಗದ ಮಾರುಕಟ್ಟೆ ನಿರ್ವಾಹಕಿ ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು.