ಉಡುಪಿಯಲ್ಲಿ ಕುಡಿಯುವ ನೀರಿನ ಸಮಸ್ಯೆ: ಪಿಡಿಓ, ಇಂಜಿನಿಯರುಗಳ ಸಭೆ
ಉಡುಪಿ, ಮೇ 20: ಕುಡಿಯುವ ನೀರಿನ ಪೂರೈಕೆ ಸಂಬಂಧ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಇಂಜಿನಿಯರುಗಳ ಸಭೆಯು ಇಂದು ಉಡುಪಿ ತಾಪಂ ಸಭಾಂಗಣದಲ್ಲಿ ನಡೆಯಿತು.
ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಪೂರೈಕೆಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಆದ್ಯತೆಯಲ್ಲಿ ಕಾರ್ಯಪ್ರವೃತ್ತರಾಗಬೇಕು. ಮಳೆಗಾಲ ಪ್ರಾರಂಭವಾಗಿ ಕುಡಿ ಯುವ ನೀರಿನ ಸಮಸ್ಯೆ ಬಗೆಹರಿಯುವವರೆಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು ಮತ್ತು ಇದಕ್ಕೆ ಸೂಕ್ತ ಆಡಳಿತಾತ್ಮಕ ಹಾಗೂ ಹಣಕಾಸು ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.
ಮಳೆಗಾಲದ ಪೂರ್ವ ಸಿದ್ಧತೆಯಾಗಿ ಚರಂಡಿಗಳ ಹೂಳು ತೆಗೆಯುವುದು, ದಾರಿದೀಪ ನಿರ್ವಹಣೆ, ಅಪಾಯಕಾರಿ ಮರಗಳ ತೆರವು ಸಹಿತ ತುರ್ತು ಸಂದರ್ಭಗಳಿಗೆ ಪೂರಕ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು ಎಂದ ಅವರು, ಸಾರ್ವಜನಿಕರ ಸಮಸ್ಯೆ ಮತ್ತು ಬೇಡಿಕೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ವಾರದಲ್ಲಿ 3 ದಿನ ನಿಗದಿತ ಸಮಯದಲ್ಲಿ ಸಾರ್ವಜನಿಕರ ಅಹವಾಲುಗಳಿಗೆ ಸಮಯ ಮೀಸಲಿಟ್ಟು ಪರಿಹಾರ ಒದಗಿಸಲಾಗುವುದು. ಈ ಬಗ್ಗೆ ಗ್ರಾಪಂ ಕಚೇರಿಗಳಲ್ಲಿ ಫಲಕ ಹಾಕಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ಸಭೆಯಲ್ಲಿ ಉಡುಪಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವಿಜಯಾ, ಬ್ರಹ್ಮಾವರ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಚ್.ವಿ.ಇಬ್ರಾಹಿಂಪುರ್, ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಸಹಾಯಕ ಕಾರ್ಯ ಪಾಲಕ ಅಭಿಯಂತರ ವೆಂಕಟೇಶ್ ಮೂರ್ತಿ, ನೀಲಾವರ ಗ್ರಾಪಂ ಅಧ್ಯಕ್ಷ ಮಹೇಂದ್ರ ನೀಲಾವರ, ಆರೂರು ಗ್ರಾಪಂ ಅಧ್ಯಕ್ಷೆ ಮಮತಾ ಶೆಟ್ಟಿ, ಚೇರ್ಕಾಡಿ ಗ್ರಾಪಂ ಅಧ್ಯಕ್ಷೆ ರೇಖಾ ಭಟ್, ವಾರಂಬಳ್ಳಿ ಗ್ರಾಪಂ ಅಧ್ಯಕ್ಷೆ ನಾಗವೇಣಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಇಂಜಿನಿಯರುಗಳು ಉಪಸ್ಥಿತರಿದ್ದರು.