ಕುಂದಾಪುರ: ಅನಧಿಕೃತ ಮರಳು ದಕ್ಕೆಯಲ್ಲಿದ್ದ 5 ಲಾರಿಗಳು ವಶ

ಉಡುಪಿ, ಮೇ 20: ಕುಂದಾಪುರ ತಾಲೂಕು ವಂಡ್ಸೆ ಹೋಬಳಿಯ ಹಟ್ಟಿಯಂಗಡಿ ಹಾಗೂ ಹೆಮ್ಮಾಡಿ ಪರಿಸರದಲ್ಲಿ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಟಕ್ಕೆ ಸಂಬಂಧಿಸಿದಂತೆ ಶುಕ್ರವಾರ ರಾತ್ರಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ಸಂಧ್ಯಾ ಅವರು ಕಾರ್ಯಾಚರಣೆ ನಡೆಸಿ 5 ಟಿಪ್ಪರ್ ಲಾರಿಗಳನ್ನು ವಶ ಪಡಿಸಿಕೊಂಡಿದ್ದಾರೆ.
ಹಟ್ಟಿಯಂಗಡಿ ಗ್ರಾಮದ ಹಟ್ಟಿಕುದ್ರು ಹಾಗೂ ಹೆಮ್ಮಾಡಿ ಗ್ರಾಮದ ಕನ್ನಡಕುದ್ರು ಎಂಬಲ್ಲಿ ಪಂಚ ಗಂಗಾವಳಿ ನದಿಯಲ್ಲಿ ಅನಧಿಕೃತವಾಗಿ ಮರಳುಗಾರಿಕೆ ನಡೆಸಿ, ಸಾಗಾಟ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸ್ವೀಕೃತವಾದ ದೂರಿನ ಮೇರೆಗೆ ಇಲಾಖೆ ಹಿರಿಯ ಭೂವಿಜ್ಞಾನಿ ಸಂದೀಪ್ ಜಿ.ಯು ಮಾರ್ಗದರ್ಶನದಲ್ಲಿ ಶುಕ್ರವಾರ ರಾತ್ರಿ 10 ಗಂಟೆಯ ಸುಮಾರಿಗೆ ಹಟ್ಟಿಕುದ್ರು ಎಂಬಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ಈ ವೇಳೆ ಮರಳು ದಕ್ಕೆಯಲ್ಲಿದ್ದ 4 ಲಾರಿಗಳನ್ನು ಹಾಗೂ ರಾತ್ರಿ ಒಂದು ಗಂಟೆಯ ಸುಮಾರಿಗೆ ಕನ್ನಡಕುದ್ರು ಎಂಬಲ್ಲಿ ದಾಳಿ ನಡೆಸಿ ಮರಳು ಸಹಿತ ಒಂದು ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.
ಈ ಕುರಿತು ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳುವವರೆಗೆ ಅನಧಿಕೃತ ಮರಳು ಸಾಗಾಣಿಕೆಗೆ ಬಳಸುತ್ತಿದ್ದ 4 ಲಾರಿಗಳನ್ನು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಸುಪರ್ದಿಯಲ್ಲಿ ಹಾಗೂ ಒಂದು ಲಾರಿಯನ್ನು ಕುಂದಾಪುರ ಪೊಲೀಸ್ ಠಾಣೆ ಸುಪರ್ದಿಯಲ್ಲಿ ಇರಿಸಲಾಗಿದೆ ಎಂದು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಕಟಣೆ ತಿಳಿಸಿದೆ.