ಆರ್ಬಿಐ 2,000 ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆದಿದ್ದೇಕೆ?

ನೋಟುಗಳನ್ನು ಬದಲಿಸಿ ಕೊಳ್ಳಬಹುದು?
ಬ್ಯಾಂಕ್ ಗಳಿಗೆ ಸಜ್ಜಾಗಲು ಸಮಯಾವಕಾಶವನ್ನು ನೀಡುವ ದೃಷ್ಟಿಯಿಂದ, ತಮ್ಮ ನೋಟುಗಳ ವಿನಿಮಯಕ್ಕಾಗಿ ಮೇ 23ರಿಂದ ಬ್ಯಾಂಕ್ ಶಾಖೆಗಳನ್ನು ಅಥವಾ ತನ್ನ ಪ್ರಾದೇಶಿಕ ಕಚೇರಿಗಳನ್ನು ಸಂಪರ್ಕಿಸುವಂತೆ ಆರ್‌ಬಿಐ ಸಾರ್ವಜನಿಕರಿಗೆ ಸೂಚಿಸಿದೆ.
ಪ್ರಸಕ್ತ ಚಲಾವಣೆಯಲ್ಲಿರುವ 2,000 ರೂ.ಮುಖಬೆಲೆಯ ನೋಟುಗಳ ಒಟ್ಟು ಮೌಲ್ಯವೆಷ್ಟು?
ಶೇ.89ರಷ್ಟು 2,000 ರೂ. ಮುಖಬೆಲೆಯ ನೋಟುಗಳನ್ನು ಮಾರ್ಚ್ 2017ಕ್ಕೆ ಮೊದಲು ವಿತರಿಸಲಾಗಿತ್ತು ಮತ್ತು ಅವು ತಮ್ಮ ಜೀವಿತಾವಧಿಯ ಅಂತಿಮ ಘಟ್ಟದಲ್ಲಿವೆ. ಚಲಾವಣೆಯಲ್ಲಿರುವ ಈ ನೋಟುಗಳ ಒಟ್ಟು ಮೌಲ್ಯವು 2018, ಮಾ. 31ಕ್ಕೆ ಇದ್ದ ಗರಿಷ್ಠ 6.73 ಲಕ್ಷ ಕೋಟಿ ರೂ.ಗಳಿಂದ 2023, ಮಾ.31ಕ್ಕೆ 3.62 ಲಕ್ಷ ಕೋಟಿ ರೂ.ಗಳಿಗೆ ಇಳಿಕೆಯಾಗಿದೆ. 2018, ಮಾ.31ಕ್ಕೆ ಶೇ. 37.3 ನೋಟುಗಳು ಚಲಾವಣೆಯಲ್ಲಿದ್ದರೆ 2023, ಮಾ.31ಕ್ಕೆ ಈ ಪ್ರಮಾಣ ಕೇವಲ ಶೇ.10.8ರಷ್ಟಿತ್ತು.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದೆಗೆದುಕೊಳ್ಳಲು ನಿರ್ಧರಿಸಿದೆ, ಆದರೆ ಅಸ್ತಿತ್ವದಲ್ಲಿರುವ ನೋಟುಗಳು ಕಾನೂನುಬದ್ಧವಾಗಿ ಮುಂದುವರಿಯಲಿವೆ ಎಂದು ಅದು ಶುಕ್ರವಾರ ಪ್ರಕಟಿಸಿದೆ.
2023, ಸೆ.30ರೊಳಗೆ 2,000 ರೂ. ಮುಖಬೆಲೆಯ ನೋಟುಗಳನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುವಂತೆ ಅಥವಾ ಯಾವುದೇ ಬ್ಯಾಂಕ್ ಶಾಖೆಯಲ್ಲಿ ಅವುಗಳನ್ನು ಇತರ ಮುಖಬೆಲೆಗಳ ನೋಟುಗಳೊಂದಿಗೆ ವಿನಿಮಯಿಸಿಕೊಳ್ಳುವಂತೆ ಆರ್ಬಿಐ ಸಾರ್ವಜನಿಕರಿಗೆ ಸೂಚಿಸಿದೆ.

ನವೆಂಬರ್,2016ರಲ್ಲಿ 500 ರೂ.ಮತ್ತು 1,000 ರೂ.ಮುಖಬೆಲೆಗಳ ನೋಟುಗಳನ್ನು ನಿಷೇಧಿಸಿದ ಬಳಿಕ ಆರ್ಥಿಕತೆಯ ಕರೆನ್ಸಿ ಅಗತ್ಯವನ್ನು ತ್ವರಿತವಾಗಿ ಪೂರೈಸುವ ಉದ್ದೇಶದಿಂದ ಆರ್‌ಬಿಐ 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದಿತ್ತು. ಉದ್ದೇಶದ ಈಡೇರಿಕೆಯೊಂದಿಗೆ ಮತ್ತು ಇತರ ಮುಖಬೆಲೆಗಳ ನೋಟುಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾದ ಬಳಿಕ 2018-19ರಲ್ಲಿ 2,000 ರೂ. ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿತ್ತು.
ಆರ್‌ಬಿಐ 2,000 ರೂ. ಮುಖಬೆಲೆಯ ಹೆಚ್ಚಿನ ನೋಟುಗಳನ್ನು ಮಾರ್ಚ್ 2017ಕ್ಕೆ ಮುನ್ನ ವಿತರಿಸಿತ್ತು ಮತ್ತು ಈ ನೋಟುಗಳು ಈಗ ತಮ್ಮ ಅಂದಾಜು ಐದು ವರ್ಷಗಳ ಜೀವಿತಾವಧಿಯ ಕೊನೆಯ ಹಂತದಲ್ಲಿವೆ. ವಹಿವಾಟುಗಳಲ್ಲಿ ಈಗ ಸಾಮಾನ್ಯವಾಗಿ 2,000 ರೂ. ನೋಟುಗಳು ಬಳಕೆಯಾಗುತ್ತಿಲ್ಲ, ಅಲ್ಲದೆ ಕರೆನ್ಸಿ ಅಗತ್ಯಗಳನ್ನು ಪೂರೈಸಲು ಇತರ ಮುಖಬೆಲೆಗಳ ನೋಟುಗಳು ಈಗ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿವೆ.
ಈ ಮೇಲಿನ ದೃಷ್ಟಿಯಿಂದ ಮತ್ತು ಭಾರತೀಯ ರಿಸರ್ವ್ ಬ್ಯಾಂಕಿನ ‘ಕ್ಲೀನ್ ನೋಟ್ ಪಾಲಿಸಿ (ಸ್ವಚ್ಛ ನೋಟು ನೀತಿ)’ಗೆ ಅನುಗುಣವಾಗಿ 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಆರ್ಬಿಐ ತಿಳಿಸಿದೆ.
· ಏನಿದು ಕ್ಲೀನ್ ನೋಟ್ ಪಾಲಿಸಿ?
ಕ್ಲೀನ್ ನೋಟ್ ಪಾಲಿಸಿ ಉತ್ತಮ ಭದ್ರತಾ ವೈಶಿಷ್ಟ್ಯಗಳೊಂದಿಗೆ ಉತ್ತಮ ಗುಣಮಟ್ಟದ ಕರೆನ್ಸಿ ನೋಟುಗಳು ಮತ್ತು ನಾಣ್ಯಗಳನ್ನು ಸಾರ್ವಜನಿಕರಿಗೆ ಒದಗಿಸಲು ಬಯಸುತ್ತದೆ ಮತ್ತು ಕೊಳಕಾದ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲಾಗುತ್ತದೆ. 2005ರ ನಂತರ ಮುದ್ರಿಸಲಾದ ನೋಟುಗಳಿಗೆ ಹೋಲಿಸಿದರೆ ಕಡಿಮೆ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿರುವ 2005ರ ಮುನ್ನ ಮುದ್ರಿಸಲಾಗಿದ್ದ ಎಲ್ಲ ನೋಟುಗಳನ್ನು ಚಲಾವಣೆಯಿಂದ ಹಿಂದೆಗೆದುಕೊಳ್ಳಲು ಆರ್ಬಿಐ ಮೊದಲು ನಿರ್ಧರಿಸಿತ್ತು. ಆದಾಗ್ಯೂ 2005ಕ್ಕೆ ಮುನ್ನ ವಿತರಿಸಲಾಗಿದ್ದ ನೋಟುಗಳು ಕಾನೂನುಬದ್ಧವಾಗಿ ಮುಂದುವರಿದಿವೆ. ಒಂದೇ ಸಮಯದಲ್ಲಿ ಹಲವು ಸರಣಿಗಳ ನೋಟುಗಳನ್ನು ಚಲಾವಣೆಯಲ್ಲಿ ಹೊಂದದಿರುವ ಪ್ರಮಾಣಿತ ಅಂತರ್ರಾಷ್ಟ್ರೀಯ ಪರಿಪಾಠಕ್ಕೆ ಅನುಗುಣವಾಗಿ ಮಾತ್ರ ಅವುಗಳನ್ನು ಚಲಾವಣೆಯಿಂದ ಹಿಂದೆಗೆದುಕೊಳ್ಳಲಾಗಿದೆ.
· 2,000 ರೂ. ನೋಟುಗಳು ಕಾನೂನುಬದ್ಧವಾಗಿ ಮುಂದುವರಿಯುತ್ತವೆಯೇ?
2,000 ರೂ. ನೋಟುಗಳು ಕಾನೂನುಬದ್ಧವಾಗಿ ಮುಂದುವರಿಯು ತ್ತವೆ ಎಂದು ಆರ್ಬಿಐ ಸ್ಪಷ್ಟಪಡಿಸಿದೆ. ಸಾರ್ವಜನಿಕರು ತಮ್ಮ ವಹಿವಾಟುಗಳಲ್ಲಿ 2,000 ರೂ.ನೋಟುಗಳನ್ನು ಬಳಸಬಹುದು ಮತ್ತು ಅವುಗಳನ್ನು ಸ್ವೀಕರಿಸಬಹುದು.
ಆದಾಗ್ಯೂ, 2023, ಸೆ.30ರೊಳಗೆ ಈ ನೋಟುಗಳನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುವಂತೆ ಅಥವಾ ಇತರ ಮುಖಬೆಲೆಗಳ ನೋಟುಗಳೊಂದಿಗೆ ವಿನಿಮಯಿಸಿಕೊಳ್ಳುವಂತೆ ಸಾರ್ವಜನಿಕರನ್ನು ಉತ್ತೇಜಿಸಲಾಗುತ್ತದೆ ಎಂದು ಆರ್ಬಿಐ ಹೇಳಿದೆ.
· ಸೆ.30ರ ಬಳಿಕ ಏನಾಗುತ್ತದೆ?
ಸೆ.30ರ ಬಳಿಕ ಈ ನೋಟುಗಳ ಸ್ಥಿತಿ ಏನಾಗಲಿದೆ ಎನ್ನುವುದನ್ನು ಆರ್ಬಿಐ ಸ್ಪಷ್ಟಪಡಿಸಿಲ್ಲ. ಆದರೆ 2,000 ರೂ.ನೋಟುಗಳ ಕುರಿತು ತನ್ನ ಸೂಚನೆಗಳು ಆ ದಿನಾಂಕದವರೆಗೆ ಊರ್ಜಿತದಲ್ಲಿರುತ್ತವೆ ಎಂದು ಅದು ತಿಳಿಸಿದೆ.
· ನಿಮ್ಮ ಬಳಿ ನೋಟುಗಳಿದ್ದರೆ ಏನು ಮಾಡಬೇಕು?
ಜನರು 2,000 ರೂ. ಮುಖಬೆಲೆಯ ನೋಟುಗಳನ್ನು ತಮ್ಮ ಖಾತೆಗಳಿಗೆ ಜಮೆ ಮಾಡುವ ಅಥವಾ ಇತರ ಮುಖಬೆಲೆಗಳ ನೋಟುಗಳೊಂದಿಗೆ ವಿನಿಮಯಿಸಿಕೊಳ್ಳುವ ಸೌಲಭ್ಯವು ಸೆ.30ರವರೆಗೆ ಎಲ್ಲ ಬ್ಯಾಂಕುಗಳಲ್ಲಿ ಲಭ್ಯವಿರುತ್ತದೆ. ವಿತರಣೆ ವಿಭಾಗಗಳನ್ನು ಹೊಂದಿರುವ ಆರ್ಬಿಐನ 19 ಪ್ರಾದೇಶಿಕ ಕಚೇರಿಗಳಲ್ಲಿಯೂ ಸೆ.30ರವರೆಗೆ ಈ ಸೌಲಭ್ಯವಿರುತ್ತದೆ.
· ವಿನಿಮಯ ಮಾಡಿಕೊಳ್ಳುವ ಅಥವಾ ಜಮೆ ಮಾಡುವ ಹಣಕ್ಕೆ ಮಿತಿಯೆಷ್ಟು?
ಒಂದು ಸಲಕ್ಕೆ ಒಟ್ಟು 20,000 ರೂ.ಗಳ ಮೊತ್ತದ 2,000 ರೂ.ಗಳ ನೋಟುಗಳನ್ನು ವಿನಿಮಯಿಸಿಕೊಳ್ಳಬಹುದು. ಇದಕ್ಕಾಗಿ ನೀವು ಖಾತೆಯನ್ನು ಹೊಂದಿರುವ ಬ್ಯಾಂಕಿಗೇ ಹೋಗಬೇಕಿಲ್ಲ. ಬ್ಯಾಂಕಿನ ಖಾತೆದಾರರಲ್ಲದವರೂ ಅವುಗಳನ್ನು ಯಾವುದೇ ಬ್ಯಾಂಕ್ ಶಾಖೆಯಲ್ಲಿ ವಿನಿಮಯಿಸಿಕೊಳ್ಳಬಹುದು.
ಖಾತೆದಾರರು ಬಿಸಿನೆಸ್ ಕರೆಸ್ಪಾಂಡೆಂಟ್ಗಳ ಮೂಲಕವೂ ಒಂದು ದಿನಕ್ಕೆ 4,000 ರೂ.ವರೆಗಿನ ಮಿತಿಗೊಳಪಟ್ಟು 2,000 ರೂ.ಗಳ ನೋಟುಗಳನ್ನು ವಿನಿಮಯಿಸಿಕೊಳ್ಳಬಹುದು.
ಬ್ಯಾಂಕ್ ಖಾತೆಗಳಲ್ಲಿ ಯಾವುದೇ ನಿರ್ಬಂಧವಿಲ್ಲದೆ 2,000 ರೂ.ಗಳ ನೋಟುಗಳನ್ನು ಜಮೆ ಮಾಡಬಹುದು, ಇದು ಕೆವೈಸಿ ಮಾನದಂಡಗಳು ಮತ್ತು ಅನ್ವಯಗೊಳ್ಳುವ ಇತರ ಶಾಸನಬದ್ಧ/ನಿಯಂತ್ರಕ ಅಗತ್ಯಗಳ ಪಾಲನೆಗೆ ಒಳಪಟ್ಟಿರುತ್ತದೆ ಎಂದು ಆರ್ಬಿಐ ತಿಳಿಸಿದೆ.
· ದೊಡ್ಡ ಸಂಖ್ಯೆಯಲ್ಲಿ ನೋಟುಗಳನ್ನು ಹೊಂದಿದ್ದರೆ ಅವರ ಕಥೆಯೇನು?
ತಾಂತ್ರಿಕವಾಗಿ ಓರ್ವ ವ್ಯಕ್ತಿಯು ಒಂದು ಸಲಕ್ಕೆ 20,000 ರೂ.ಗಳಂತೆ ಹಲವಾರು ಸಲ ನೋಟುಗಳನ್ನು ವಿನಿಮಯಿಸಿಕೊಳ್ಳಬಹುದು. ಆದರೆ ಇದು ಜಾರಿ ಸಂಸ್ಥೆಗಳು ಮತ್ತು ಆದಾಯ ತೆರಿಗೆ ಇಲಾಖೆಯ ಗಮನವನ್ನು ಸೆಳೆಯುವ ನಿರೀಕ್ಷೆಯಿದೆ. ದೊಡ್ಡ ಪ್ರಮಾಣದಲ್ಲಿ 2,000 ರೂ.ಗಳ ನೋಟುಗಳನ್ನು ಹೊಂದಿರುವವರಿಗೆ ಅವುಗಳ ವಿನಿಮಯ ಕಷ್ಟವಾಗುವ ಸಾಧ್ಯತೆಯಿದೆ.
· 2016ರ ನೋಟು ನಿಷೇಧ ಸಂದರ್ಭದಲ್ಲಿಯ ಅವ್ಯವಸ್ಥೆ ಪುನರಾವರ್ತನೆಗೊಳ್ಳಬಹುದೇ?
ಈ ಬಾರಿ ಬ್ಯಾಂಕ್ ಶಾಖೆಗಳು 2016ರಲ್ಲಿದ್ದಂತೆ ಅವ್ಯವಸ್ಥೆ, ಗೊಂದಲಗಳು ಮತ್ತು ಉದ್ದನೆಯ ಸರತಿ ಸಾಲುಗಳಿಗೆ ಸಾಕ್ಷಿಯಾಗುವ ಸಾಧ್ಯತೆ ಕಡಿಮೆ. 2018-19ರಲ್ಲಿಯೇ 2,000 ರೂ.ನೋಟುಗಳ ಮುದ್ರಣ ಸ್ಥಗಿತಗೊಂಡಿದ್ದು ಅವು ಸಾರ್ವಜನಿಕರಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿಲ್ಲ. ಅಲ್ಲದೆ 2016ರಲ್ಲಿ 500ರೂ. ಮತ್ತು 1,000 ರೂ. ಮುಖಬೆಲೆಯ ನೋಟುಗಳ ನಿಷೇಧವನ್ನು ಏಕಾಏಕಿ ಪ್ರಕಟಿಸಲಾಗಿತ್ತು ಮತ್ತು ಇದು ಜನರನ್ನು ಅಚ್ಚರಿ, ಗೊಂದಲದಲ್ಲಿ ಮುಳುಗಿಸಿತ್ತು. 2,000 ರೂ. ಮುಖಬೆಲೆಯ ನೋಟುಗಳ ವಿನಿಮಯವು ಮೇ 23ರಿಂದಷ್ಟೇ ಆರಂಭಗೊಳ್ಳಲಿದೆ ಮತ್ತು ಇದರಿಂದ ಬ್ಯಾಂಕುಗಳು ಮತ್ತು ಸಾರ್ವಜನಿಕರಿಗೆ ಸಾಕಷ್ಟು ಸಮಯ ದೊರೆಯಲಿದೆ.
ಕೃಪೆ:indianexpress.com







