ಇಂದು ಆರ್ ಸಿಬಿಯ ಪ್ಲೇ ಆಫ್ ಕನಸಿಗೆ ಮಳೆ ಅಡ್ಡಿಯಾಗುವ ಸಾಧ್ಯತೆ

ಬೆಂಗಳೂರು: ಈಗ ನಡೆಯುತ್ತಿರುವ ಐಪಿಎಲ್ ಟೂರ್ನಿಯ ಲೀಗ್ ಹಂತದ ಕೊನೆಯ 2 ಪಂದ್ಯಗಳು ರವಿವಾರ ನಡೆಯಲಿದೆ. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್- ಸನ್ ರೈಸರ್ಸ್ ಹೈದರಾಬಾದ್, 2ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಸೆಣಸಾಡಲಿವೆ. ಆರ್ ಸಿಬಿ ಇಂದಿನ ಪಂದ್ಯ ಗೆದ್ದರೆ 4ನೇ ತಂಡವಾಗಿ ಪ್ಲೇ-ಆಫ್ ಗೆ ಪ್ರವೇಶಿಸುವ ಅವಕಾಶವಿದೆ.
ಆದರೆ ಬೆಂಗಳೂರಿನಲ್ಲಿ ನಡೆಯುವ ಆರ್ ಸಿಬಿ-ಗುಜರಾತ್ ನಡುವಿನ ಈ ಮಹತ್ವದ ಪಂದ್ಯದ ಮೇಲೆ ಮಳೆಯ ಕರಿಛಾಯೆ ಬಿದ್ದಿದೆ. ಶನಿವಾರ ನಗರದಲ್ಲಿ ಮಳೆಯಾಗಿದ್ದು, ರವಿವಾರ ಸಂಜೆಯೂ ಮಳೆಯಾಗುವ ಸಾಧ್ಯತೆಯಿದೆ. ಇದು ಆರ್ ಸಿಬಿ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.
ಒಂದು ವೇಳೆ ಇವತ್ತಿನ ಪಂದ್ಯಕ್ಕೆ ಮಳೆ ಅಡ್ಡಿಯಾದರೆ ಓವರ್ ಕಡಿತಗೊಳಿಸಿ ಪಂದ್ಯ ನಡೆಸಬಹುದು. ಆದರೆ ಮಳೆ ಹೆಚ್ಚಾಗಿ ಸಂಪೂರ್ಣ ಪಂದ್ಯ ರದ್ದಗೊಂಡರೆ ಆರ್ ಸಿಬಿಗೆ ದೊಡ್ಡ ಹೊಡೆತ ಬೀಳಲಿದೆ. ಪಂದ್ಯ ರದ್ದಾದರೆ ಎರಡೂ ತಂಡಗಳು 1 ಅಂಕವನ್ನು ಹಂಚಿಕೊಳ್ಳಲಿದೆ. ಈ ಫಲಿತಾಂಶವು ಪ್ರಸ್ತುತ 14 ಅಂಕ ಹೊಂದಿರುವ ಆರ್ ಸಿಬಿಗೆ ಪ್ರಯೋಜನವಾಗುವುದಿಲ್ಲ. ಆರ್ ಸಿಬಿಯ ಒಟ್ಟು ಅಂಕ 15ಕ್ಕೆ ತಲುಪಲಿದೆ. ಆಗ ಆರ್ ಸಿಬಿಯ ಪ್ಲೇ ಆಫ್ ಸನ್ನಿವೇಶ ಹೈದರಾಬಾದ್ ವಿರುದ್ದದ ಮುಂಬೈ ಪಂದ್ಯದ ಫಲಿತಾಂಶವನ್ನು ಅವಲಂಬಿಸಿರುತ್ತದೆ. ಸದ್ಯ 14 ಅಂಕ ಹೊಂದಿರುವ ಮುಂಬೈ ತಂಡ ಹೈದರಾಬಾದ್ ವಿರುದ್ಧ ಜಯ ಸಾಧಿಸಿದರೆ 16 ಅಂಕ ದೊಂದಿಗೆ ಪ್ಲೇ ಆಫ್ ಗೆ ಲಗ್ಗೆ ಇಡಲಿದೆ.
ಒಂದು ವೇಳೆ ಹೈದರಾಬಾದ್ ವಿರುದ್ಧ ಮುಂಬೈ ಸೋತರೆ, ಬೆಂಗಳೂರು ಪಂದ್ಯ ರದ್ದಾದರೂ ಆರ್ ಸಿಬಿಗೆ ನಷ್ಟವಾಗದು. ಅದು 15 ಅಂಕದೊಂದಿಗೆ ಮುಂದಿನ ಸುತ್ತಿಗೇರುತ್ತದೆ. ಮುಂಬೈ-ಆರ್ ಸಿಬಿ(5ಕ್ಕಿಂತ ಹೆಚ್ಚು ರನ್)ಸೋತರೆ, ರಾಜಸ್ಥಾನ ರಾಯಲ್ಸ್ ಪ್ಲೇ ಆಫ್ ಗೆ ಪ್ರವೇಶಿಸಲಿದೆ.